ಕಾರ್ಕಳ, ಜು 04 (Daijiworld News/MSP): ಮಿಯ್ಯಾರು ಗ್ರಾಮದ ಕಾಜರಬೈಲುನಲ್ಲಿ ಜು.1ರಂದು ಮಗುವೊಂದು ಸಾವಿಗೀಡಾಗಿದ್ದು, ಪ್ರಕರಣ ಕುರಿತು ಅಂತಿಮ ವರದಿ ಕೈಸೇರಿರುವ ಮೂಲಕ ಹಲವು ಅನುಮಾನಗಳಿಗೆ ತೆರೆ ಬಿದ್ದಿದೆ.
ಮಗುವಿನ ಗಂಟಲದ್ರವ ಪರೀಕ್ಷೆಯ ವರದಿಯಲ್ಲಿ ಕೊವಿಡ್ ನೆಗೆಟಿವ್ ಎಂಬುದು ದೃಢಪಟ್ಟಿದೆ. ಹಾಲುಕುಡಿಸುವ ಸಂದರ್ಭದಲ್ಲಿ ಅನ್ನನಾಳಕ್ಕೆ ಸೇರಬೇಕಾಗಿದ್ದ ಹಾಲು ನೇರವಾಗಿ ಶ್ವಾಸಕೋಶದೊಳಗೆ ಲೀನವಾಗಿ ಮಗು ಉಸಿರುಗಟ್ಟಿ ಮೃತಪಟ್ಟಿರಬೇಕೆಂದು ವೈದ್ಯರು ಪ್ರಥಮ ಹಂತದಲ್ಲಿಯೇ ಖಚಿತಪಡಿಸಿದ್ದರು.
ಮೂಲತಃ ಬಿಜಾಪುರ ಜಿಲ್ಲೆಯ ಮುದ್ದೆ ಕೇಶವಪುರದ ದಂಪತಿಯ ಹತ್ತು ತಿಂಗಳ ಎಳೆಕೂಸು ಅದಾಗಿದ್ದು, ಮಿಯ್ಯಾರು ಕಾಜರಬೈಲು ಎಂಬಲ್ಲಿ 28 ನೆಲೆಸಿದ್ದ ದಂಪತಿ ಎಪ್ರಿಲ್ ತಿಂಗಳಿನಲ್ಲಿ ಊರಿಗೆ ಹೋಗಿ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಮರಳಿ ಕಾರ್ಕಳಕ್ಕೆ ಬಂದಿದ್ದರು. ಜೂನ್ 28ರ ರಾತ್ರಿ ಮಗುವಿನಲ್ಲಿ ಜ್ವರ ಕಾಣಿಸಿಕೊಂಡು ಉಸಿರಾಟದ ತೊಂದರೆಯಾದುದರಿಂದ ಮರುದಿನ ಕಾರ್ಕಳದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗಿತ್ತೆಂಬ ಹೆತ್ತವರ ಹೇಳಿಕೆಯನ್ವಯ ಮೃತ ಮಗುವಿನ ಗಂಟಲದ್ರವವನ್ನು ಪರೀಕ್ಷೆಯ ಕಳುಹಿಸಿಕೊಡಲಾಗಿತ್ತು. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.