ಸುಳ್ಯ ಏ 08 : ರಾಜ್ಯದ ಕಾಂಗ್ರೆಸ್ ಸರಕಾರದಿಂದ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಲೇ ಬಂದಿದೆ. ಹಿಂದೂ ವಿರೋಧಿಗಳಿಗೆ ಬೆಂಬಲ ನೀಡುವ ಹಿಂದೂ ಸಂಘಟನೆಗಳ ದಮನಕ್ಕೆ ಮುಂದಾಗಿದೆ. ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಆರೋಪಗಳನ್ನು ಹೊರೆಸಿ ಕೇಸು ದಾಖಲು ಮಾಡುತ್ತಿದ್ದಾರೆ. ಇದಕ್ಕಾಗಿ ಚುನಾವಣೆಯಲ್ಲಿ ನಮ್ಮ ಎಲ್ಲಾ ಸಂಘಟನೆಗಳ ಸದಸ್ಯರು ನೇರವಾಗಿ ಬಿಜೆಪಿಯ ಜೊತೆ ಗುರುತಿಸಿಕೊಂಡು ಪ್ರಚಾರಕ್ಕೆ ಇಳಿದು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದು ಹಿಂದೂ ಸಂಘಟನೆ ಮುಖಂಡ ಮಹೇಶ್ ಕುಮಾರ್ ರೈ ಮೇನಾಲ ಹೇಳಿದರು.
ಅವರು ಸುಳ್ಯದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ರಾಜ್ಯದ ಕಾಂಗ್ರೆಸ್ ಸರಕಾರ ಹಿಂದೂ ಸಂಘಟನೆಗಳ ಮುಖಂಡರ ಮೇಲೆ ಕೇಸುಗಳನ್ನು ಹಾಕಿ 10 ಲಕ್ಷದ ಬಾಂಡ್ಗಳನ್ನು ವಿಧಿಸಿ ಪೊಲೀಸ್ರ ಮೂಲಕ ನಮ್ಮನ್ನು ಧಿಗ್ಭಂದನದಲ್ಲಿ ಇಟ್ಟು ಈ ಭಾರಿ ಕಾಂಗ್ರೆಸನ್ನು ಗೆಲ್ಲಿಸುವ ತಂತ್ರಕ್ಕೆ ಕೈ ಹಾಕಿದೆ. ಇಲ್ಲಿಯ ವರೆಗೆ ನಾವು ಯಾವುದೇ ರಾಜಕೀಯ ಪಕ್ಷದ ಪರ ಪ್ರಚಾರಕ್ಕೆ ಇಳಿದಿಲ್ಲ. ಆದರೆ ಇವತ್ತು ಹಿಂದೂ ಕಾರ್ಯಕರ್ತರನ್ನು ಆರೋಪಿಗಳ ಸ್ಥಾನದಲ್ಲಿ ನಿಲ್ಲಿಸಿ 10 ಲಕ್ಷ ಬಾಂಡ್ ನೊಂದಿಗೆ ಮುಚ್ಚಳಿಕೆಯನ್ನು ಪೊಲೀಸ್ ಇಲಾಖೆ ಮಾಡುತ್ತಿದೆ. ಈ ಚುನಾವಣೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಯಾವುದೇ ರೀತಿಯಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ಹೋಗಬಾರದು ಎನ್ನುವ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ. ಇದಕ್ಕಾಗಿ ಈ ಚುನಾವಣೆಯಲ್ಲಿ ನಮ್ಮ ಎಲ್ಲಾ ಸಂಘಟನೆಗಳು ನೇರವಾಗಿ ಬಿಜೆಪಿಯ ಜೊತೆ ಗುರುತಿಸಿಕೊಂಡು ಪ್ರಚಾರಕ್ಕೆ ದುಮುಕುತ್ತೇವೆ ಎಂದು ಹೇಳಿದ ಅವರು ನಮಗೆ ಬಾಂಡ್ ಅಲ್ಲ ನಮ್ಮನ್ನು ಬಂಧಿಸಿದರೂ ನಾವು ಹೆದರುವುದಿಲ್ಲ. ನಾವು ಎಲ್ಲಿಯೂ ಕಾನೂನನ್ನು ಮೀರಿ ಕೆಲಸ ಮಾಡಿಲ್ಲ. ನಮ್ಮ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಸಮಾಜದಲ್ಲಿ ಭಯೋತ್ಪಾದಕ ಚಟುವಟಿಕೆ ಮಾಡುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಪೋಲಿಸ್ ಇಲಾಖೆ ತಹಶೀಲ್ದಾರ್ ಅವರಿಗೆ ನೀಡಿದೆ. ದೇಶವನ್ನು ಪ್ರೀತಿಸುವ ನಮ್ಮ ಮೇಲೆ ಇಂತಹ ಆರೊಪ ಮಾಡಿರುವುದು ಖಂಡನೀಯ. ಈ ಎಲ್ಲಾ ಕಾರಣದಿಂದ ನಮ್ಮ ಸಂಘಟನೆಯ ವಾರ್ಡ್ ಸದಸ್ಯರ ಮೂಲಕ ಬಿಜೆಪಿಯನ್ನು ಗೆಲ್ಲಿಸುವ ನಿರ್ಧಾರ ಮಾಡಿದ್ದೇವೆ. ಕಾಂಗ್ರೆಸ್ ಸರಕಾರವೇ ನಮ್ಮನ್ನು ಚುನಾವಣಾ ಅಖಾಡಕ್ಕೆ ಇಳಿಸಿದೆ. ಈ ಸಂಘಟನೆಗೆ ಶಕ್ತಿ ಬಂದಿದೆ. ನಮ್ಮ ಮುಂದಿನ ಹೋರಾಟ ಹಿಂದೂತ್ವ ವಿರೋಧಿಗಳನ್ನು ಸೋಲಿಸುವುದೇ ಆಗಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನಮ್ಮ ಉದ್ದೇಶ ಎಂದು ಹೇಳಿದರು.
ಲತೀಶ್ ಗುಂಡ್ಯ ಮಾತನಾಡಿ ಕೈರಂಗಳ ಗೋಶಾಲೆಯಿಂದ ಗೋವುಗಳನ್ನು ಕದ್ದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮರಣಾಂತ ಉಪವಾಸ ಕೈಗೊಂಡಿರುವ ಟಿ.ಜಿ ರಾಜಾರಾಂ ಭಟ್ ಅವರಿಗೆ ವಿಶ್ವಹಿಂದೂ ಪರಿಷತ್ ಸಂಪೂರ್ಣ ಬೆಂಬಲ ನೀಡಲಿದೆ. ಇಂತಹ ಘಟನೆಗಳಿಗೆ ಪೊಲೀಸ್ಇಲಾಖೆಯ ವೈಫಲ್ಯವೇ ಕಾರಣ. ಹಲವು ಪ್ರಕರಣಗಳು ನಡೆದಿದ್ದರೂ ಇಲ್ಲಿಯವರೆಗೆ ಯಾವುದೇ ಒಬ್ಬ ಗೋಕಳ್ಳನನ್ನು ಹಿಡಿದ ಉದಾಹರಣೆ ಇಲ್ಲ. ಇಂತಹ ಘಟನೆಗಳ ಮರುಕಳಿಸಬಾರದು. ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಗಣಪತಿ ಭಟ್ ಮಜಿಗುಂಡಿ, ಮುಖಂಡರಾದ ಅಜಿತ್ ಪೇರಾಲು, ಪ್ರಕಾಶ್ ಯಾದವ್, ನವೀನ್ ಉಪಸ್ಥಿತರಿದ್ದರು.