ಮಂಗಳೂರು, ಜು 04 (Daijiworld News/MSP):ಹವಾಮಾನ ಬದಲಾವಣೆಯೊಂದಿಗೆ ಜಿಲ್ಲೆಯಲ್ಲಿ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಕೊವೀಡ್ ನ ಐಎಲ್ಐ ಹಾಗೂ ಸಾರಿ ಪ್ರಕರಣಗಳು ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಕಳೆದ 13 ದಿನಗಳ ಅವಧಿಯಲ್ಲಿ 723 ಮಂದಿ ಸೋಂಕಿಗೆ ಒಳಗಾಗಿರುವುದು ಕೊರೊನಾ ಹರಡುತ್ತಿರುವ ವೇಗದ ಬಗ್ಗೆ ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ಇನ್ ಫ್ಲೊಯೆನ್ಝಾ ಲೈಕ್ ಇಲ್ ನೆಸ್ (ಶೀತ ಜ್ವರ) ಐಎಲ್ಐ ಮತ್ತು ತೀವ್ರ ಉಸಿರಾಟದ ಸಮಸ್ಯೆ (ಸಾರಿ ) ಪ್ರಕರಣಗಳಿಂದಲೇ ಸ್ಥಳೀಯವಾಗಿ ಕೊರೊನಾ ಸೋಂಕು ಹಬ್ಬುತ್ತಿದೆಯೇ ಎಂಬ ಅನುಮಾನಕ್ಕೆ ಕಾರಣವಾಗಿದೆ. ಕರಾವಳಿಯಲ್ಲಿ ಈಗಾಗಲೇ ’ಐಎಲ್ಐ ’ ಸಂಬಂಧಿಸಿದ 162 ಹಾಗೂ ’ಸಾರಿ’ ೫೧ ಪ್ರಕರಣ ದಾಖಲಾಗಿದೆ.
ಜಿಲ್ಲೆಯಲ್ಲಿ ಹವಾಮಾನ ಬದಲಾವಣೆಯಿಂದ ಹೆಚ್ಚುತ್ತಿರುವ ಐಎಲ್ಐ ಹಾಗೂ ಸಾರಿ ಪ್ರಕರಣದ ಸೋಂಕಿತರ ಶೀಘ್ರ ಪತ್ತೆ ಆಗದಿದ್ದರೆ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸೋಂಕಿನ ಪ್ರಮಾಣ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ.
"ಈ ಎರಡು ರೋಗ ಲಕ್ಷಣ ಉಳ್ಳವರು ಕಡ್ಡಾಯವಾಗಿ ಗಂಟಲು ದ್ರವ ಮಾದರಿ ತೆಗೆದು ಪರೀಕ್ಷೆಗೊಳಪಡಿಸಬೇಕೆಂದು ಹೇಳಿದೆ. ಸಾಮಾನ್ಯ ಜ್ವರ ಇರಬಹುದೆಂದು ನಿರ್ಲಕ್ಷಿಸಿ ಕೊರೊನಾ ಸಮಯದಲ್ಲಿ ಮನೆಯಲ್ಲೇ ಇರುವುದನ್ನು ಬಿಟ್ಟು ಜವಬ್ದಾರಿಯುತ ನಾಗರಿಕರಂತೆ ವರ್ತಿಸಿದರೆ ಮನೆಯವರಿಗೆ ಹಾಗೂ ಇತರರಿಗೆ ಸೋಂಕು ಹರಡುವ ಸಾಧ್ಯತೆಯನ್ನು ನಿಯಂತ್ರಿಸಬುದು" ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಚಂದ್ರ ಬಾಯರಿ.