ಮಂಗಳೂರು, ಜು 04 (DaijiworldNews/PY): ವಂದೇ ಭಾರತ್ ಮಿಷನ್ ಅಡಿಯಲ್ಲಿ ಏರ್ ಇಂಡಿಯಾ ವಿಮಾನಗಳನ್ನು ಜುಲೈ 4 ರಿಂದ ಜುಲೈ 14ರಿಂದ ಹಾರಾಡಲಿದ್ದು, ಯುಎಇಯಿಂದ ವಂದೇ ಭಾರತ್ ಮಿಷನ್ ಅಡಿಯಲ್ಲಿ ಕೇರಳಕ್ಕೆ ಮುಂದಿನ 11 ದಿನಗಳವರೆಗೆ 38 ವಿಮಾನಗಳು ಹಾರಾಡಲಿದೆ.
ಆದರೆ, ದುರದೃಷ್ಟವಶಾತ್ ಯುಎಇಯಿಂದ ಬೆಂಗಳೂರು, ಮಂಗಳೂರಿಗೆ ಯಾವುದೇ ವಿಮಾನಗಳನ್ನು ನಿಗದಿಪಡಿಸಿಲ್ಲ. ಇಲ್ಲಿಯವರೆಗೆ ಯುಎಇಯಿಂದ ಕರ್ನಾಟಕಕ್ಕೆ ಕೆಲವೇ ವಿಮಾನಗಳು ಬಂದಿವೆ. ಕೊರೊನಾದಿಂದಾಗಿ, ಯುಎಇಯಲ್ಲಿ ಹಲವಾರು ಜನರು ತಮ್ಮ ಊರಿಗೆ ಮರಳಲು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ರಾಜ್ಯಕ್ಕೆ ವಿಮಾನಗಳ ಕೊರತೆಯಿಂದ ಕನ್ನಡಿಗರು ವಿದೇಶದಲ್ಲಿ ಕಾಯುವಂತಹ ಪರಿಸ್ಥಿತಿ ಎದುರಾಗಿದೆ.
"ಈ ನಡುವೆ ಕೇಂದ್ರ ಸರ್ಕಾರ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಆಕ್ರೋಶ ವ್ಯಕ್ತವಾಗಿದೆ. ಯುಎಇಯಲ್ಲಿ ಸಿಲುಕಿರುವ ಕರ್ನಾಟಕದ ಜನರನ್ನು ತವರಿಗೆ ಕರೆತರಲು ರಾಜ್ಯ ಸರ್ಕಾರ ಕೂಡ ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ. ಕಳೆದ ತಿಂಗಳು, ಕೇರಳ ಸರ್ಕಾರವು 40 ಕ್ಕೂ ಹೆಚ್ಚು ವಿಮಾನಗಳನ್ನು ವಂದೇ ಭಾರತ್ ಮಿಷನ್ ಅಡಿಯಲ್ಲಿ ಕಳುಹಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಕರ್ನಾಟಕಕ್ಕೆ ವಿಮಾನಗಳನ್ನು ತರುವ ಯೋಜನೆಗಳನ್ನು ರೂಪಿಸುವುದು ಸುಲಭ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಂದೇ ರಾಜಕೀಯ ಪಕ್ಷದಿಂದ ಆಡಳಿತದಲ್ಲಿವೆ. ಆದರೆ, ಯುಎಇಯಲ್ಲಿ ಸಿಲುಕಿರುವ ಕನ್ನಡಿಗರ ಕಷ್ಟಗಳನ್ನು ಅರ್ಥಮಾಡಿಕೊಳ್ಳಲು ಎರಡೂ ಸರ್ಕಾರಗಳು ವಿಫಲವಾಗಿವೆ ಎಂದು ತೋರುತ್ತಿದೆ" ಎಂದು ಯುಎಇಯ ಕನ್ನಡಿಗರಲ್ಲಿ ಪ್ರಸಿದ್ಧ ಸಮಾಜ ಸೇವಕ ಮಂಜುನಾಥ್ ಹೇಳಿದ್ದಾರೆ.
"ಕರ್ನಾಟಕದಿಂದ ಚುನಾಯಿತ ಸಂಸದರು ಅನಿವಾಸಿ ಭಾರತೀಯರನ್ನು ತವರಿಗೆ ಕರೆತರುವ ವಿಷಯದಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಬಹುಪಾಲು ಸಂಸದರು ಆಡಳಿತ ಪಕ್ಷಕ್ಕೆ ಸೇರಿದವರು. ಆ ಪಕ್ಷದ ಸಕ್ರಿಯ ಕಾರ್ಯಕರ್ತರು ಮತ್ತು ಪದಾಧಿಕಾರಿಗಳಾಗಿರುವುದರಿಂದ ನನಗೆ ಇದನ್ನು ಹೇಳಲು ನಾಚಿಕೆಯಾಗುತ್ತಿದೆ. ಕರ್ನಾಟಕದ ಜನರು ಈ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮೂಲಕ ತಮಗೆ ತಾವೇ ಮೋಸಮಾಡಿಕೊಂಡಿದ್ದಾರೆ. ಏತನ್ಮಧ್ಯೆ, ಕೇರಳ ಮತ್ತು ತಮಿಳುನಾಡಿನ ಸಂಸದರು ವಿದೇಶದಲ್ಲಿ ಸಿಲುಕಿರುವ ತಮ್ಮ ರಾಜ್ಯದ ಜನರಿಗೆ ವಿಮಾನಯಾನ ಸಚಿವಾಲಯದಿಂದ ವಿಮಾನಗಳನ್ನು ನಿಗದಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದು ಅವರಿಗೆ ತಿಳಿದಿದೆ. ಕರ್ನಾಟಕದ ಚುನಾಯಿತ ಪ್ರತಿನಿಧಿಗಳು ಪ್ರತಿಸ್ಪರ್ಧಿಗಳ ಮೇಲೆ ಕೋಮುವಾದಿ ಹೇಳಿಕೆಗಳು ಮತ್ತು ವೈಯಕ್ತಿಕ ನಿಂದನೆಗಳನ್ನು ಮಾಡುವುದರಲ್ಲಿ ನಿರತರಾಗಿದ್ದಾರೆ" ಎಂದು ರಾಜು ಸೀಡಿಕೊಪ್ಪಲ್ ಹೇಳಿದ್ದಾರೆ.
ಕೇರಳದಿಂದ ರಾಯಭಾರ ಕಚೇರಿಯಲ್ಲಿ ಒಂದು ರೀತಿಯ ಲಾಬಿ ಇದೆ ಎಂದು ಹೇಳಲಾಗುತ್ತಿದ್ದು,ಈ ಕಾರಣದಿಂದ ಕೇರಳಕ್ಕೆ ವಿಮಾನಗಳನ್ನು ಸುಲಭವಾಗಿ ತರಬಹುದು ಎನ್ನಲಾಗುತ್ತಿದೆ. ಸಂಕಷ್ಟಕ್ಕೊಳಗಾದ ಜನರಿಗೆ ಸರ್ಕಾರದ ಬಗ್ಗೆ ನಂಬಿಕೆ ಇದೆ. ಆದರೆ, ಬೆಂಗಳೂರು, ಮಂಗಳೂರಿಗೆ ವಿಮಾನಗಳು ಲಭ್ಯವಿಲ್ಲದ ಕಾರಣ ಅವರು ತಮ್ಮ ಊರಿಗೆ ಬರಲು ಬಹಳ ಸಮಯ ಕಾಯಬೇಕಾಗಿರುವುದರಿಂದ ಅವರು ನಿರಾಸೆಗೊಳ್ಳುವ ಸಾಧ್ಯತೆಯಿದೆ. ರಾಜ್ಯಕ್ಕೆ ಹೆಚ್ಚಿನ ವಿಮಾನಗಳನ್ನು ತರಲು ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು. ಇದು ಅನೇಕರಿಗೆ ಸಹಾಯವಾಗಲಿದೆ. ಬೆಂಗಳೂರು ಮತ್ತು ಮಂಗಳೂರಿಗೆ ವಿಮಾನ ಹಾರಾಟಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಇದನ್ನು ಸರ್ಕಾರ ಪರಿಗಣಿಸಬೇಕಾಗಿದೆ.
ಒಟ್ಟಾರೆಯಾಗಿ, ಕೇರಳ ಮತ್ತು ತಮಿಳುನಾಡಿನ ಸಂಸದರು ವಿದೇಶದಲ್ಲಿ ಸಿಲುಕಿರುವ ತಮ್ಮ ರಾಜ್ಯದ ಜನರಿಗೆ ವಿಮಾನಯಾನ ಸಚಿವಾಲಯದಿಂದ ವಿಮಾನಗಳನ್ನು ನಿಗದಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಕೇಂದ್ರ ಸರ್ಕಾರವು ಕರ್ನಾಟಕವನ್ನು ನಿರ್ಲಕ್ಷಿಸಿದೆ ಹಾಗೂ ಯುಎಇಯಲ್ಲಿ ಸಿಲುಕಿರುವ ಜನರಿಗೆ ಸಹಾಯ ಹಸ್ತ ನೀಡಲು ವಿಫಲವಾಗಿದೆ.