ಮಂಗಳೂರು, ಜು. 04 (DaijiworldNews/MB) : ದ.ಕ. ಜಿಲ್ಲೆಯಲ್ಲಿ ಕೊರೊನಾ ತನ್ನ ಕರಾಳ ಹಸ್ತವನ್ನು ಚಾಚುತ್ತಲ್ಲೇ ಇರುವ ನಡುವೆಯೂ ನಗರದಲ್ಲಿ ಮಾಸ್ಕ್ ಧರಿಸಿದೆಯೇ ಹಲವು ಮಂದಿ ತಿರುಗಾಡುತ್ತಿದ್ದಾರೆ. ಈ ನಡುವೆ ಮಾಸ್ಕ್ ಧರಿಸದವರಿಗೆ ದಂಡ ಹಾಕುವ ಪ್ರಕ್ರಿಯೆ ಮತ್ತಷ್ಟು ಬಿರುಸುಗೊಂಡಿದ್ದು ಶುಕ್ರವಾರ ಒಂದು ದಿನದಲ್ಲೇ 25 ಮಂದಿಯಿಂದ 200 ರೂಪಾಯಿಯಂತೆ ಒಟ್ಟು 5 ಸಾವಿರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.
ಏತನ್ಮಧ್ಯೆ ಮಾಸ್ಕ್ ಧರಿಸದ ಯುವಕನೋರ್ವನಿಗೆ ದಂಡ ವಿಧಿಸಿದಾಗ ಆತ ದಂಡ ಪಾವತಿಗೆ ನಿರಾಕರಿಸಿದ್ದಾನೆ. ಯುವಕ ದಂಡ ಪಾವತಿ ಮಾಡಲು ನಕಾರ ಸೂಚಿಸಿದ ಹಿನ್ನಲೆ ಹಿರಿಯ ಆರೋಗ್ಯ ನಿರೀಕ್ಷಕರು ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆ ನಂತರ ಯುವಕನು ಠಾಣೆಗೆ ಬಂದು ದಂಡ ಪಾವತಿ ಮಾಡಬೇಕಾಯಿತು.
ಜನರಲ್ಲಿ ಸ್ವಯಂ ಪ್ರೇರಿತ ಜಾಗೃತಿ ಮೂಡಬೇಕಾದ್ದಲ್ಲಿ ಈ ರೀತಿಯಾದ ಕಠಿಣ ಕ್ರಮ ಈ ಸಂದರ್ಭದಲ್ಲಿ ಅನಿವಾರ್ಯವಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಇನ್ನು ಮೂಲ್ಕಿಯಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಉಗುಳುವ ಹಾಗೂ ಮಾಸ್ಕ್ ಧರಿಸದಿರುವವರಿಂದ ಒಟ್ಟು ೫ ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ. ಜನರು ಸಾರ್ವಜನಿಕ ಪ್ರದೇಶದಲ್ಲಿ ಉಗುಳುವುದು ಕಡಿಮೆಯಾಗಿದ್ದು ಹೆಚ್ಚಿನ ಜನರು ಮಾಸ್ಕ್ ಧರಿಸುತ್ತಿದ್ದಾರೆ ಎಂದು ಮುಖ್ಯಾಧಿಕಾರಿ ಪಿ ಚಂದ್ರ ಪೂಜಾರಿ ತಿಳಿಸಿದ್ದಾರೆ.
ಸರ್ಕಾರದ ನಿರ್ದೇಶನದಂತೆ ಮಾಸ್ಕ್ ಧರಿಸದ ನಗರ ಪ್ರದೇಶದವರಿಂದ 200 ರೂ. ಹಾಗೂ ಗ್ರಾಮಾಂತರ ಪ್ರದೇಶದವರಿಗೆ 100 ರೂ. ದಂಡ ವಿಧಿಸಲಾಗುತ್ತದೆ.