ಕುಂದಾಪುರ, ಜು 04 (Daijiworld News/MSP): ವಿಶ್ವ ಹಿಂದೂ ಪರಿಷತ್ ಘಟಕವಾದ ಭಜರಂಗದಳ ಕಾರ್ಯಕರ್ತರು ಸದಾ ಸಮಾಜಮುಖಿ ಚಿಂತನೆಯೊಂದಿಗೆ ಕೆಲಸ ಮಾಡುತ್ತಿದ್ದಾರೆ. ಆದರೆ ಸಂಘಟನೆ ಕಾರ್ಯಕರ್ತರನ್ನು ರೌಡಿಗಳು, ಕ್ರಿಮಿನಲ್, ಗೂಂಡಾಗಳು ಎಂದು ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತದೆ. ನಮ್ಮನ್ನು ಯಾವ ಹೆಸರಿನಲ್ಲಿ ಕರೆದರೂ ತೊಂದರೆಯಿಲ್ಲ. ನಾವು ಸಮಾಜದ್ರೋಹ ಕೆಲಸ ಮಾಡಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ವಿಭಾಗಿಯ ಕಾರ್ಯದರ್ಶಿ ಶರಣ್ ಪಂಪ್ವೆಲ್ ಹೇಳಿದರು.
ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಕಂಡ್ಲೂರು ಘಟಕ, ರೆಡ್ ಕ್ರಾಸ್ ಸೊಸೈಟಿ ಕುಂದಾಪುರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕಂಡ್ಲೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಬ್ರಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ನಾವು ಯಾವುದೇ ಧರ್ಮದ ವಿರೋಧಿಗಳು ಅಲ್ಲ. ಆದರೆ ಸಮಾಜಕ್ಕೆ ತೊಂದರೆಯಾದಾಗ ನಮ್ಮ ಹೋರಾಟ ನಿರಂತರವಾಗಿ ಇರಲಿದೆ. ಹಿಂದುಗಳಿಗೆ ತೊಂದರೆ ಕೊಡುವವರು, ಗೋವು ಕಳ್ಳತನ ಹಾಗೂ ಹತ್ಯೆ, ಲವ್ ಜಿಹಾದ್ ಅಂತಹ ಕೃತ್ಯವೆಸಗುವರನ್ನು ನಾವು ವಿರೋಧಿಸುತ್ತೇವೆ. ದೇಶಕ್ಕೆ ತೊಂದರೆ ಕೊಟ್ಟರೆ ಸುಮ್ಮನೆ ಕೂರುವುದಿಲ್ಲ ಎಂದು ಪಂಪ್ವೆಲ್ ಎಚ್ಚರಿಸಿದರು.
ನಮ್ಮ ದೇಶಕ್ಕೆ ಸಂಕಷ್ಟ ಕೊಡುತ್ತಿರುವ ಚೀನಾದವರ ಉತ್ಪನ್ನಗಳನ್ನು ನಿಷೇದಿಸುವ ಮೂಲಕ ದೇಶ ಪ್ರೇಮ ಮೆರೆಯಬೇಕಿದೆ. ಸ್ವದೇಶಿ ಚಿಂತನೊಯೊಂದಿಗೆ ಸ್ವಾವಲಂಬಿ ಭಾರತದ ಪರಿಕಲ್ಪನೆಯಲ್ಲಿ ಬದುವ ಚಿಂತನೆಯನ್ನು ನಾವು ಮಾಡೋಣ ಎಂದು ಹೇಳಿದ ಅವರು, ಕೋವಿಡ್ ವಾರಿಯರ್ಸ್ ಆಗಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.
ಸರ್ವೇ ಜನಾಹ ಸುಖಿನೋ ಭವಂತು ಎಂಬ ಧ್ಯೇಯದಡಿಯಲ್ಲಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಸಮಾಜದಲ್ಲಿನ ಉತ್ತಮ ಕಾರ್ಯಕ್ಕೆ ಶ್ರಮಿಸುತ್ತಿದ್ದಾರೆ. ಯಾವುದೇ ಸಮಯದಲ್ಲಿ ರಕ್ತ ಅಗತ್ಯ ಬಿದ್ದರೆ ಅಂತಹ ವೇಳೆ ಭಜರಂಗದಳ ಕಾರ್ಯಕರ್ತರು ಆಸ್ಪತ್ರೆಗೆ ತೆರಳಿ ರಕ್ತದಾನ ಮಾಡಿದ ಉದಾಹರಣೆಗಳಿದೆ. 2 ತಿಂಗಳ ಅವಧಿಯಲ್ಲಿ ಮಂಗಳೂರು ವಿಭಾಗದಲ್ಲಿ 8 ಸಾವಿರಕ್ಕೂ ಅಧಿಕ ಯುನಿಟ್ ರಕ್ತದಾನವನ್ನು ಮಾಡಲಾಗಿದೆ ಎಂದರು.