ಮಂಗಳೂರು, ಏ 09 : ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ ಚಂದ್ರ ಶೆಟ್ಟಿ ಹಾಗೂ ಬಿಜೆಪಿಯ ಹಿರಿಯ ನಾಯಕಿ ಹಾಗೂ ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ ಅವರ ವಿರುದ್ದ ಚುನಾವಣಾ ಅಧಿಕಾರಿಗಳು ನೀತಿ ಸಂಹಿತೆ ಉಲ್ಲಂಘನೆಯ ಕೇಸ್ ಜಡಿದಿದ್ದಾರೆ.
ಸಾಂದರ್ಭಿಕ ಚಿತ್ರ
ನೀತಿ ಸಂಹಿತೆ ಉಲ್ಲಂಘಿಸಿ ಜನರಿಗೆ ಊಟ ಹಾಕಿರುವುದರ ವಿರುದ್ದ ಭಾನುವಾರ ಈ ಎರಡು ಪ್ರಕರಣಗಳನ್ನು ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ ಚಂದ್ರ ಶೆಟ್ಟಿ ಅವರ ನೇತೃತ್ವದಲ್ಲಿ 2 ದಿನಗಳ ಹಿಂದೆ ಶಿರ್ವ ಠಾಣೆ ವ್ಯಾಪ್ತಿಯ ಬೆಳಪುವಿನಲ್ಲಿ ಕಾಂಗ್ರೆಸ್ ಕಾರ್ಯಕ್ರಮವೊಂದನ್ನು ಮಾಡಿದ್ದು, ಈ ಕಾರ್ಯಕ್ರಮದ ವೀಡಿಯೋ ತಪಾಸಣೆ ಮಾಡುವಾಗ ಊಟ ನೀಡಿರುವುದು ಈ ಸಂದರ್ಭದಲ್ಲಿ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ವೀಡಿಯೊ ಚಿತ್ರೀಕರಣದ ಆಧಾರದ ಮೇಲೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇನ್ನೊಂದೆಡೆ ಕಟಪಾಡಿಯಲ್ಲಿ ಬಿಜೆಪಿ ಮಹಿಳಾ ಸಮಾವೇಶದ ವೇಳೆ ಅಲ್ಲಿ ಸೇರಿದ್ದ ಜನರಿಗೆ ಊಟ ನೀಡಿರುವುದು ಕೂಡಾ ವೀಡಿಯೊ ಚಿತ್ರಣವನ್ನು ಪರಿಶೀಲಿಸಿದಾಗ ತಿಳಿದಿದ್ದು ಹೀಗಾಗಿ ಗೀತಾಂಜಲಿ ಸುವರ್ಣ ವಿರುದ್ಧ ನೀತಿ ಸಂಹಿತೆ ಉಲ್ಲಂಘಿಸಿದ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.