ಮಂಗಳೂರು ಏ 09 : ಕೈರಂಗಳದ ಅಮೃತಧಾರ ಗೋಶಾಲೆಯಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹವನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಎಸಿ ವಿನಯರಾಜ್ ಹೇಳಿದರು.
ಅವರು ನಗರದ ಕಾಂಗ್ರೆಸ್ ಭವನದಲ್ಲಿ ಏ 09 ರಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಬಿಜೆಪಿಯವರಿಗೆ ಜನರಲ್ಲಿ ಮತ ಕೇಳಲು ಯಾವುದೇ ಉತ್ತಮ ಕೆಲಸ ಮಾಡಿಲ್ಲ. ಹೀಗಾಗಿ ಬಿಜೆಪಿಯವರು ಉಪವಾಸ ಧರಣಿಯ ನೆಪದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಈಗಾಗಲೇ ಗೋಕಳವು ಪ್ರಕರಣ ದಾಖಲಾಗಿ ಬಂಧನದ ಕೆಲಸ ಆಗಿದ್ದರೂ ಉಪವಾಸ ಮುಂದುವರಿಸಿದ್ದಾರೆ . ಉಪವಾಸ ಸತ್ಯಾಗ್ರಹ ಚುನಾವಣೆಗಾಗಿ ಮಾತ್ರ . ಹೀಗಾಗಿ ಇದರ ಹಿಂದಿನ ದುರುದ್ದೇಶದ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರನ್ನು ಇದೇ ಸಂದರ್ಭ ಒತ್ತಾಯಿಸಿದರು.
ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಸೋಲುವ ಭೀತಿ ಶುರುವಾಗಿದೆ.ಇದಕ್ಕಾಗಿ ಕೋಮು ಭಾವನೆಯನ್ನು ಕೆರಳಿಸುವ ಸಂಚು ಮಾಡಿದ್ದಾರೆ. ನಿಜವಾದ ಗೋಗಳ್ಳತನದ ವಿರುದ್ದದ ಸತ್ಯಾಗ್ರಹಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತದೆ. ಆದರೆ ರಾಜಾರಾಮ ಭಟ್ ಅಲ್ಲಿ ಕೋಮು ಗಲಭೆ ಸೃಷ್ಟಿಸುವ ರಾಜಕೀಯ ಮುಖಂಡರ ಪ್ರಚೋದನಕಾರಿ ಭಾಷಣಕ್ಕೆ ಅನುವು ಮಾಡಿ ಕೊಟ್ಟಿರುವುದು ಸಂಶಯಕ್ಕೆ ಎಡೆಮಾಡಿಕೊಡುತ್ತದೆ.ಗೋ ಕಳವು ಯಾರೇ ಮಾಡಿದ್ದರೂ ಕಾಂಗ್ರೆಸ್ ಇದನ್ನು ಖಂಡಿಸುತ್ತದೆ. ಕಳವಾದ ಸ್ಥಳದಲ್ಲಿ ಸಿಸಿ ಟಿವಿ ,ಕಾವಲುಗಾರ ಇದ್ದರೂ ಗೋಕಳ್ಳರ ಗುರುತು ಸಿಗಲಿಲ್ಲವೇ, ಕಾವಲುಗಾರನನ್ನು ಮಂಪರು ಪರೀಕ್ಷೆ ಒಳಪಡಿಸಿದರೆ ಸತ್ಯಸತ್ಯತೆ ತಿಳಿಯುತ್ತದೆ. ಕೇಸು ದಾಖಲಿಸಿ ೨೪ ಗಂಟೆಯೂ ಆಗದೇ, ತನಿಖೆ ನಡೆಸಲು ಪೋಲಿಸರಿಗೆ ಸಮಯವಕಾಶ ನೀಡದೇ ಸತ್ಯಾಗ್ರಹ ನಡೆಸಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಪೊಲೀಸರು ಅರೆಸ್ಟ್ ಮಾಡಿದ ಆರೋಪಿಗಳು ನೈಜ್ಯ ಆರೋಪಿಗಳಲ್ಲ ಎಂದು ರಾಜಾರಾಮ ಭಟ್ ಹೇಳುತ್ತಿದ್ದಾರೆ. ಅವರಿಗೆ ನಿಜವಾದ ಆರೋಪಿಗಳ ಬಗ್ಗೆ ಮಾಹಿತಿ ಇದ್ದರೆ ಪೊಲೀಸರಿಗೆ ನೀಡಬಹುದಿತ್ತು . ಅವರ ಈ ಹೇಳಿಕೆ ಸಂಶಯಕ್ಕೀಡುಮಾಡಿದೆ ಎಂದರು.
ಇನ್ನು ಪತ್ರಿಕಾಗೋಷ್ಟಿಯಲ್ಲಿ ಸದಾಶಿವ ಉಳ್ಳಾಲ್ ,ನಿತ್ಯಾನಂದ, ಮೊಹಮ್ಮದ್ ಹನೀಫ್, ಯುತ್ ಕಾಂಗ್ರೆಸ್ ನ ದಯನಂದ ,ರಮಾನಂದ, ನೀರಜ್ ಪಾಲ್,ಮತ್ತಿತರರು ಉಪಸ್ಥಿತರಿದ್ದರು.