ಬೆಂಗಳೂರು, ಏ 09 : ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ತನಿಖೆಯ ಬಗ್ಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಏ. 09 ರ ಸೋಮವಾರದಂದು ಪ್ರಕರಣದ ಮರು ತನಿಖೆಗೆ ಕೋರಿ ಸೌಜನ್ಯ ತಂದೆ ಚಂದಪ್ಪ ಗೌಡ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಸಿಬಿಐ ತನಿಖೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು. ಸೌಜನ್ಯ ತಂದೆ ಚಂದಪ್ಪ ಗೌಡ ಅವರ ಪರ ವಕೀಲರು ವಾದವನ್ನು ಮಂಡಿಸಿ, ’ ಸೌಜನ್ಯ ಪ್ರಕರಣದ ಸಂಬಂಧ, ಮೊದಲು ತನಿಖೆ ನಡೆಸಿದ್ದ ಬೆಳ್ತಂಗಡಿ ಪೊಲೀಸರ ಮುಂದೆ ಹರೀಶ್ ಹಾಗೂ ಗೋಪಾಲ್ ಎಂಬುವರು ಸಾಕ್ಷ್ಯ ನುಡಿದಿದ್ದರು. ಆದರೆ, ಬಳಿಕ ಪ್ರಕರಣದ ತನಿಖೆಯನ್ನು ಸಿಐಡಿ,ನಂತರ ಸಿಬಿಐಗೆ ವರ್ಗಾಯಿಸಲಾಗಿತ್ತು. ತನಿಖೆ ಪೂರ್ಣಗೊಳಿಸಿದ್ದ ಸಿಬಿಐ ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಆದರೆ, ದೋಷಾರೋಪ ಪಟ್ಟಿಯಲ್ಲಿ ಆ ಇಬ್ಬರ ಹೇಳಿಕೆಯನ್ನೂ ಉಲ್ಲೇಖಿಸಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಆಕ್ಷೇಪ ಆಲಿಸಿದ ನ್ಯಾಯಪೀಠವೂ, ಸಿಬಿಐ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಪೊಲೀಸ್ ತನಿಖೆಯಲ್ಲಿ ಸೂಕ್ತ ನ್ಯಾಯ ಸಿಗುವುದಿಲ್ಲ ಎನ್ನುವ ಕಾರಣಕ್ಕೆ ತನಿಖೆಯನ್ನು ಸಿಐಡಿಗೆ, ಆ ಬಳಿಕ ಸಿಬಿಐಗೆ ವಹಿಸಲಾಗಿದೆ. ಆದರೆ ಸಿಬಿಐ ತನಿಖೆಯೂ ಅನುಮಾನಾಸ್ಪದವಾಗಿರುವಂತಿದೆ. ಒಂದು ವೇಳೆ ನಿಮ್ಮಿಂದ ಸಮರ್ಥವಾಗಿ ತನಿಖೆ ನಡೆಸಲು ಸಾಧ್ಯವಿಲ್ಲವಾದರೆ ನ್ಯಾಯಾಲಯವೇ ವಿಶೇಷ ತನಿಖಾ ತಂಡ ರಚಿಸಬೇಕಾಗುತ್ತದೆ ’ ಎಂದು ಎಚ್ಚರಿಕೆ ನೀಡಿತು.