ಮಂಗಳೂರು, ಜು. 06 (DaijiworldNews/MB) : ಬಜಪೆ ಸಮೀಪದ ಕರಂಬಾರು ಅಂತೋಣಿಕಟ್ಟೆಯ ಬಳಿ ಜುಲೈ 1ರಂದು ರಾತ್ರಿ ತನ್ನ ಪತ್ನಿಯನ್ನು ಕಲ್ಲಿನ ಕೋರೆಗೆ ದೂಡಿ ಹತ್ಯೆಗೈದು ಪರಾರಿಯಾಗಿದ್ದ ಕಾವೂರಿನ ಟಿಪ್ಪರ್ ಚಾಲಕ ಗಣೇಶ್ (35) ನನ್ನು ಪೊಲೀಸರು ಬಂಧಿಸಿದ್ದಾರೆ.

ಭಾನುವಾರ ಆರೋಪಿಯು ಬೈಕ್ನಲ್ಲಿ ಸಂಚರಿಸುತ್ತಿದ್ದ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ದೊರೆತಿದ್ದು ಕಾವೂರು ಇನ್ಸ್ಪೆಕ್ಟರ್ ರಾಘವ ಪಡೀಲ್ ನೇತೃತ್ವದ ಪೊಲೀಸ್ ತಂಡ ಕಾವೂರು ಬಳಿ ಆರೋಪಿ ಗಣೇಶ್ನನ್ನು ಬಂಧಿಸಿದೆ.
ಗಣೇಶ್ ಹಾಗೂ ಆತನ ಪತ್ನಿ ಶಾಂತಾ (30) ಕಾವೂರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದರು. ಕಾವೂರಿನಲ್ಲಿ ಟಿಪ್ಪರ್ ಚಾಲಕನಾಗಿರುವ ಗಣೇಶ್ ಮೂಲತಃ ಹಾಸನ ನಿವಾಸಿಯಾಗಿದ್ದು ಆತನ ಪತ್ನಿ ಶಾಂತಾ ಕಾಸರಗೋಡಿನ ಸಾಲೆತಡ್ಕ ನಿವಾಸಿಯಾಗಿದ್ದಾರೆ. ಇವರಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ.
ಪತಿ ಪತ್ನಿಯ ನಡುವೆ ವೈಮನಸ್ಸು ಉಂಟಾದ ಕಾರಣದಿಂದ ಪತ್ನಿ ಶಾಂತಾ ಮಕ್ಕಳನ್ನು ಕರೆದುಕೊಂಡು ಕೆಲವು ಸಮಯದಿಂದ ಪ್ರತ್ಯೇಕವಾಗಿ ವಾಸವಾಗಿದ್ದರು. ಇತ್ತೀಚೆಗೆ ಪತಿ ಮಾತುಕತೆ ನಡೆಸಿ ಆಕೆಯನ್ನು ವಾಪಾಸ್ ಮನೆಗೆ ಕರೆದುಕೊಂಡು ಬಂದಿದ್ದನು. ಜುಲೈ 1 ರ ಸಂಜೆ ಪತ್ನಿಯನ್ನು ಹೊರಗೆ ಕರೆದುಕೊಂಡು ಹೋದ ಪತಿ ವಾಪಾಸ್ ಬರದೆ ಜುಲೈ 2 ರಂದು ತನ್ನ ಮನೆಯಲ್ಲಿ ಮಕ್ಕಳೊಂದಿಗೆ ಇದ್ದ ಪತ್ನಿ ಶಾಂತಾ ಅವರ ತಾಯಿಗೆ ಕರೆ ಮಾಡಿ ಪತ್ನಿಯನ್ನು ಹತ್ಯೆ ಮಾಡಿದ್ದೇನೆ ಎಂದು ತಿಳಿಸಿದ್ದಾನೆ. ಆ ಕೂಡಲೇ ಆತನ ಅತ್ತೆ ಕಾಪೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಗುರುವಾರ ರಾತ್ರಿ ಪೊಲೀಸರು ಆರೋಪಿ ಗಣೇಶ್ ಕಲ್ಲು ಸಾಗಾಟ ಮಾಡುತ್ತಿದ್ದ ಕರಂಬಾರಿನ ಕಲ್ಲಿನ ಕೋರೆಗೆ ಹೋಗಿದ್ದು ಶಾಂತಾ ಅವರ ಮೃತದೇಹ ಅಲ್ಲಿ ಪತ್ತೆಯಾಗಿತ್ತು.
ಇನ್ನು ಆರೋಪಿಯು ಪತ್ನಿಯನ್ನು ಶೀಲವನ್ನು ಶಂಕಿಸಿ ಹತ್ಯೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು ಕೊರೊನಾ ಪರೀಕ್ಷೆ ಮಾಡಿಸಲಿರುವ ಕಾರಣದಿಂದ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.