ಮಂಗಳೂರು, ಜು. 06 (DaijiworldNews/MB) : ವೈದ್ಯರ ದಿನಾಚರಣೆಯ ಸಂದರ್ಭದಲ್ಲಿ ಮಂಗಳೂರಿನ ಹೆಸರಾಂತ ವೈದ್ಯರಾದ ಡಾ. ಗೌತಮ್ ಕುಳಮರ್ವ ಅವರು ಕೊರೊನಾ ವಾರಿಯರ್ಸ್, ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರು ಹಾಗೂ ಲಡಾಖ್ನಲ್ಲಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸಿ ನಿರ್ಮಿಸಿರುವ ವಿಡಿಯೋ ದೇಶದಾದ್ಯಂತ ವೈರಲ್ ಆಗಿದ್ದು ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಡಾ. ಗೌತಮ್ ಕುಳಮರ್ವ ಅವರಿಗೆ ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋದಲ್ಲಿ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಹಾಡಿರುವ ''ಯೇ ಮೇರೆ ವತನ್ ಕೇ ಲೋಗೋ'' ಹಾಡನ್ನು ಬಳಸಲಾಗಿದ್ದು ಗೌತಮ್ ಕುಳಮರ್ವ ಅವರಿಗೆ ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿರುವ ಗಾಯಕಿ ಲತಾ ಮಂಗೇಶ್ಕರ್ ಅವರು, ''ಈ ವಿಡಿಯೋ ನೋಡಿ ಬಹಳ ಖುಷಿಯಾಯಿತು. ನೀವು ಕಷ್ಟಪಟ್ಟಿದ್ದೀರಿ'' ಎಂದು ಅಭಿನಂದಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಡಾ. ಗೌತಮ್ ಕುಳಮರ್ವ ಅವರು, ''ಕೊರೊನಾ ವೈರಸ್ ಹಲವಾರು ಜೀವಗಳನ್ನು ಬಲಿತೆಗೆದುಕೊಂಡಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಾಗೂ ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯರಿಗೆ ಗೌರವ ಸಲ್ಲಿಸಲು ಈ ವಿಡಿಯೋವನ್ನು ಮಾಡಿದೆ. ಇದನ್ನು ಪ್ರಚಾರಕ್ಕಾಗಿ ಮಾಡಿಲ್ಲ. ಆದರೆ ಇದು ಶೀಘ್ರವೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ'' ಎಂದು ಹೇಳಿದ್ದಾರೆ.
''ನಾನು ಲತಾ ಜೀ ಯವರ ಅಭಿಮಾನಿ. ಅವರು ಕರೆ ಮಾಡಿದಾಗ ಅವರು ಆಸ್ಪತ್ರೆಯಲ್ಲಿ ಇದ್ದ ಸಂದರ್ಭದಲ್ಲಿ ವೈದ್ಯರು ಅವರನ್ನು ನೊಡಿಕೊಂಡ ಬಗ್ಗೆ ತಿಳಿಸಿದರು. ಅವರು ನನಗೆ ಕರೆ ಮಾಡುವರು ಎಂಬ ಯೋಚನೆಯು ನನಗೆ ಇರಲಿಲ್ಲ. ಇದು ನನ್ನ ಕಾರ್ಯಕ್ಕೆ ಸಿಕ್ಕ ಬಹುಮಾನವೆಂದು ನಾನು ಭಾವಿಸುತ್ತೇನೆ. ಇನ್ನು ಕೊರೊನಾ ಸೋಂಕಿನಿಂದ ಎಲ್ಲರೂ ಜಾಗೃತರಾಗಿರಿ'' ಎಂದು ತಿಳಿಸಿದ್ದಾರೆ.
6 ನಿಮಿಷಗಳ ಈ ವಿಡಿಯೋದಲ್ಲಿ ಯುವಕರಿಗೆ ವೆಂಟಿಲೇಟರ್ನ್ನು ಉಪಯೋಗಿಸುವಂತೆ ತಿಳಿಸಿ ತಾನು ವೆಂಟಿಲೇಟರ್ ತಿರಸ್ಕರಿಸಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ 90 ವರ್ಷದ ವೃದ್ದೆ, ಕೊರೊನಾ ವಾರಿಯರ್ಸ್ಗಳಾದ ಆಶಾ ಕಾರ್ಯಕರ್ತೆಯರು, ದಾದಿಯರು, ವೈದ್ಯರು, ಲಡಾಖ್ನಲ್ಲಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸಲಾಗಿದೆ.