ಬೈಂದೂರು, ಜು. 06 (DaijiworldNews/MB) : ಬೈಂದೂರಿನ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ನ ಮಾನವೀಯ ಕೈಂಕರ್ಯದ ಮೂಲಕ ಸಮಾಜಮುಖಿ ಚಿಂತನೆಯಿಂದ ಗಮನ ಸಳೆಯುತ್ತಿದೆ.ಸಮಾಜದ ನೋವಿಗೆ ಸ್ಪಂದಿಸುವ ಉದಾತ್ತ ಮನೋಭಾವ ಹೊಂದಿರುವ ಈ ಟ್ರಸ್ಟ್ ಈಗಾಗಲೇ ಸಾಕಷ್ಟಯು ಮಾನವೀಯ ಕಾರ್ಯಗಳನ್ನು ಕಾರ್ಯಗತಗೊಳಿಸಿ ಜನಮನ್ನಣೆ ಪಡೆದಿದೆ. ಇದೀಗ ಇನ್ನೊಂದು ಸೇವಾ ಕಾರ್ಯಕ್ಕೆ ಟ್ರಸ್ಟ್ ಸಾಕ್ಷಿಯಾಗಿದೆ. ಅದುವೇ ಆರ್ಥಿಕವಾಗಿ ಆಸಹಾಯಕವಾಗಿರುವ ಕುಟುಂಬವೊಂದಕ್ಕೆ ಸುಂದರವಾದ ಸೂರನ್ನು ನಿರ್ಮಿಸಿ ಕೊಟ್ಟಿರುವುದು.


ಉಳ್ಳವರು ಇವತ್ತು ತಮ್ಮ ಮೂಗಿನ ನೇರಕ್ಕೆ ಯೋಚಿಸುವ ಸಂದರ್ಭದಲ್ಲಿ ಗೋವಿಂದ ಬಾಬು ಪೂಜಾರಿ ಅವರ ನೇತೃತ್ವದ ಟ್ರಸ್ಟ್ ಉಪ್ಪುಂದದ ಬಾಯಂಹಿತ್ಲುವಿನಲ್ಲಿ ಬಡ ಕುಟುಂಬವೊಂದಕ್ಕೆ ಸುಂದರವಾದ ಮನೆಯನ್ನು ನಿರ್ಮಾಣ ಮಾಡಿಕೊಡುವ ಮೂಲಕ ಸಮಾಜದಲ್ಲಿ ಟ್ರಸ್ಟ್ಗಳು ಹೀಗೂ ಸೇವೆ ನೀಡಬಹುದು ಎನ್ನುವುದನ್ನು ಸಾಭೀತು ಪಡಿಸಿದೆ.
ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಯಂಹಿತ್ಲು ನಿವಾಸಿ ಬೇಬಿ ಸುಬ್ಬಯ್ಯ ದೇವಾಡಿಗ ಕುಟುಂಬಕ್ಕೆ ಸ್ವಂತ ಸೂರು ಹೊಂದಬೇಕು ಎನ್ನುವ ಕನಸಿತ್ತು. ಆದರೆ ಆರ್ಥಿಕ ಅಡಚಣೆಯಿಂದ ಅವರ ಕನಸು ಕನಸಾಗಿಯೇ ಉಳಿದಿತ್ತು. ತಳಪಾಯ ರಚನೆಗೊಂಡಿದ್ದ ಮನೆಯ ಪೂರ್ಣಗೊಳಿಸುವ ಕಾರ್ಯ ಟ್ರಸ್ಟ್ ಮೂಲಕ ನಡೆದಿದೆ.
ಬೇಬಿ ದೇವಾಡಿಗ ಅವರ ಕುಟುಂಬ ಸುಮಾರು 30 ವರ್ಷಗಳಿಂದ ಚಿಕ್ಕ ಗುಡಿಸಿಲಿನಲ್ಲಿ ವಾಸಿಸುತ್ತಿದ್ದರು. ಇತ್ತಿಚಿನ ವರ್ಷಗಳಲ್ಲಿ ಅದು ತೀರ ದುಸ್ಥಿತಿಗೆ ತಲುಪಿದ್ದರಿಂದ ಹೊಸ ಮನೆ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಅವರಿಗೆ ಆರ್ಥಿಕ ಅಡಚಣೆ ಎದುರಾಗಿತ್ತು. ಆರಂಭದಲ್ಲಿ ಮನೆಯ ತಳಪಾಯ ನಿರ್ಮಾಣಕ್ಕೆ ಅವರು ಕೂಡಿಸಿಟ್ಟಿದ್ದ ಒಂದಿಷ್ಟು ಹಣದೊಂದಿಗೆ ಬೆಂಗಳೂರು ಉದ್ಯಮಿ ವಂಡ್ಸೆ ರಮೇಶ್ ದೇವಾಡಿಗ ಹಾಗೂ ಒಂದಿಷ್ಟು ದಾನಿಗಳು ನೆರವಾಗಿದ್ದರು. ಮನೆಯ ತಳಪಾಯ ಹಾಗೂ ಅರೆಬರೆ ಗೋಡೆ ನಿರ್ಮಾಣವಾಗಿತ್ತು. ಆದರೆ ಮನೆ ಪೂರ್ಣಗೊಳಿಸಲು ಮತ್ತೆ ಆರ್ಥಿಕ ಸಂಕಷ್ಟ ಎದುರಾಗಿ ಅರ್ಧಕ್ಕೆ ಕಾಮಗಾರಿ ನಿಂತಿತ್ತು. ಎರಡು ತಿಂಗಳ ಹಿಂದೆ ಸ್ಥಳೀಯ ಜನಪ್ರತಿನಿಧಿಯೋರ್ವರ ಮೂಲಕ ಕುಟುಂಬದ ಸಂಕಷ್ಟ ಟ್ರಸ್ಟ್ನ ಗಮನಕ್ಕೆ ಬಂದಿದ್ದು, ಮನೆಯನ್ನು ಪೂರ್ಣಗೊಳಿಸುವ ಭರವಸೆ ದೊರೆತಿತ್ತು.
ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಅವರ ಅವರ ನಿರ್ದೇಶನದಂತೆ ಅರ್ಧಕ್ಕೆ ನಿಂತಿದ್ದ ಕಾಮಗಾರಿಯನ್ನು ಇದೀಗ ಪೂರ್ಣಗೊಳಿಸಲಾಗಿದೆ. ಮನೆಯ ಗೋಡೆ ಪೂರ್ಣಗೊಳಿಸಿ ಗಾರೆ, ಮನೆಯ ಮೇಲ್ಛಾವಡಿ, ನೆಲಕ್ಕೆ ಟೈಲ್ಸ್ ಹಾಗೂ ವಿಟ್ರಿಫೈಡ್, ಪೇಟಿಂಗ್ ಮಾಡಿಸಲಾಗಿದ್ದು ಸುಸಜ್ಜಿತವಾಗಿ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಜು.6ರಂದು ಫಲಾನುಭವಿಗೆ ಮನೆ ಹಸ್ತಾಂತರಿಸುವ ಕಾರ್ಯವೂ ನಡೆಯಿತು.
ಗೋವಿಂದ ಬಾಬು ಪೂಜಾರಿ ಅವರ ತಂದೆ-ತಾಯಿಗಳಾದ ಬಾಬು ಮಂಜಮ್ಮ ನೂತನ ಮನೆಯನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು.ರಘುನಾಥ ಜೊಯಿಷಿ ಆಶೀರ್ವಚನ ನೀಡಿದರು. ಟ್ರಸ್ಟ್ನ ಪ್ರವರ್ತಕರಾದ ಗೋವಿಂದ ಬಾಬು ಪೂಜಾರಿ, ಅವರ ಪತ್ನಿ ಮಾಲತಿ ಗೋವಿಂದ ಬಾಬು ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಗುರುರಾಜ ಪೂಜಾರಿ ಭೋಜನದ ವ್ಯವಸ್ಥೆ ಮಾಡಿದ್ದರು.
ಫಲಾನುಭವಿಗಳಾದ ಬೇಬಿ ಸುಬ್ಬಯ್ಯ ದೇವಾಡಿಗ ಈ ಸಂದರ್ಭ ಕೃತಜ್ಞತೆಯ ಮೂಲಕ ದಾನಿಗಳ ಕೊಡುಗೆಯನ್ನು ಸ್ಮರಿಸಿಕೊಂಡರು. ಮನೆ ನಿರ್ಮಿಸಬೇಕು ಎಂಬ ಆಸೆ ಇದ್ದರೂ ಅರ್ಥಿಕ ಅಡಚಣೆ ಎದುರಾಗಿತ್ತು. ಆರಂಭವಲ್ಲಿ ಒಂದಿಷ್ಟು ಹಣ ಸೇರಿಸಿ, ದಾನಿಗಳ ನೆರವಿನಿಂದ ನೆಲಗಟ್ಟು, ಗೋಡೆ ನಿರ್ಮಿಸಿದ್ದೆವು. ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಬಳಿಕ ಗೋವಿಂದ ಬಾಬು ಪೂಜಾರಿ ಅವರು ಮನೆ ಪೂರ್ಣಗೊಳಿಸಲು ಸಂಪೂರ್ಣ ನೆರವಾಗಿದ್ದಾರೆ ಎಂದಿದ್ದಾರೆ.
ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ರಿ. ಉಪ್ಪುಂದ ಇದರ ಮ್ಯಾನೆಜಿಂಗ್ ಟ್ರಸ್ಟಿ ಗೋವಿಂದ ಬಾಬು ಪೂಜಾರಿ ಮಾತನಾಡಿ ಕಳೆದ ಆರು ವರ್ಷಗಳಿಂದ ಟ್ರಸ್ಟ್ ಮೂಲಕ ಹಲವಾರು ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ನೆರವು ನೀಡುತ್ತಾ ಬರಲಾಗುತ್ತಿದೆ. ಆರ್ಥಿಕ ಅಡಚಣೆಯಿರುವವರಿಗೆ ಅರ್ಹ ಘಲಾನುಭವಿಗಳಿಗೆ ಮನೆ ನಿರ್ಮಿಸಿಕೊಡುವುದು ಟ್ರಸ್ಟಿನಿಂದ ದೊಡ್ಡ ಯೋಜನೆಯಾಗಿದ್ದು, ಈ ಬಗ್ಗೆ ಸಾರ್ಥಕ ಭಾವವಿದೆ ಎನ್ನುತ್ತಾರೆ.
ಯಶಸ್ವಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಉದ್ಯಮ ಕ್ಷೇತ್ರದಲ್ಲಿ ಯುವಕರಿಗೆ ಮಾದರಿಯಾದವರು. ಉದ್ಯಮದ ಜೊತೆಗೆ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಆರಂಭಿಸಿ ಅದರ ಮೂಲಕ ಶಿಕ್ಷಣ, ಧಾರ್ಮಿಕ, ಆರೋಗ್ಯ, ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಿಗೆ ಲಕ್ಷಾಂತರ ರೂಪಾಯಿ ದೇಣಿಗೆ ನೀಡುತ್ತಿದ್ದಾರೆ. ಪ್ರಸ್ತುತ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು ವಿದ್ಯಾರ್ಥಿ ವೇತನ, ವಿದ್ಯಾರ್ಥಿ ದತ್ತು ಸ್ವೀಕಾರ, ಶಿಕ್ಷಣ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದಾರೆ.