ಬೆಂಗಳೂರು, ಏ 10 : ಅಸಮಾಧಾನದಿಂದ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ ಅವರು ಮರಳಿ ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಿದ್ದಾರೆ ಎನ್ನಲಾಗಿದೆ. ಬಿಜೆಪಿಗೆ ಸೇರಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ, ಅಲ್ಲಿ ಸೂಕ್ತವಾದ ಸ್ಥಾನಮಾನ ನೀಡಿಲ್ಲ ಅನ್ನುವ ಅಸಮಾಧಾನವಿತ್ತು. ಇದೇ ಕಾರಣದಿಂದ ಬಿಜೆಪಿಯಲ್ಲೂ ಸಕ್ರಿಯವಾಗಿ ತನ್ನನ್ನು ತಾನು ತೊಡಗಿಸಿಕೊಂಡಿರಲಿಲ್ಲ. ಕೃಷ್ಣ ಅವರ ಬೆಂಬಲಿಗರು ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಕಾಂಗ್ರೆಸ್ ಸೇರುವಂತೆ ಒತ್ತಡ ಹೇರಿದ್ದರು ಎನ್ನಲಾಗಿದೆ, ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮಾತುಕತೆಯೂ ನಡೆದಿದ್ದು , ಕೃಷ್ಣ ಅವರನ್ನು ಪಕ್ಷಕ್ಕೆ ಮರಳಿ ಕರೆತರಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರ ಅನುಮತಿಯನ್ನು ಪಡೆದೇ ಮರಳಿ ಕರೆ ತರಲು ಯೋಜಿಸಲಾಗಿದೆ ಎಂದು ತಿಳಿದು ಬಂದಿದೆ. ಇನ್ನು ಅಳಿಯನ ಮೇಲಾಗಿರುವ ಐಟಿ ದಾಳಿ ಮತ್ತು ತಮ್ಮ ಪುತ್ರಿ ಶಾಂಭವಿ ಅವರಿಗೆ ಮಂಡ್ಯ ಜಿಲ್ಲೆಯ ಮದ್ದೂರು, ಅಥವಾ ಬೆಂಗಳೂರು ಕ್ಷೇತ್ರವೊಂದರಲ್ಲಿ ಟಿಕೆಟ್ ನೀಡುವಂತೆ ಕೃಷ್ಣ ಹೇಳಿದ್ದರೂ, ಬಿ.ಜೆ.ಪಿ. ಸ್ಪಂದಿಸಿಲ್ಲ. ಹೀಗೆ ಹಲವು ಕಾರಣಗಳಿಂದ ಅಸಮಾಧಾನದಿಂದಲೇ ಇರುವ ಕೃಷ್ಣ ಅವರಿಗೆ ಮತ್ತೆ ಕಾಂಗ್ರೆಸ್ ಗಾಳ ಹಾಕಿದೆ ಎನ್ನಲಾಗಿದೆ. ಆದರೆ ಈ ಕುರಿತು ಎಸ್.ಎಂ.ಕೃಷ್ಣ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದಾರೆ. ಇದೇ ರೀತಿ ಕಾಂಗ್ರೆಸ್ ಪಕ್ಷದಿಂದ ದೂರವಾಗಿರುವ ಹಲವು ನಾಯಕರನ್ನು ಕರೆತರಲು ಪ್ಲಾನ್ ಮಾಡಲಾಗಿದೆ.