ದೀಪಕ್ ಆಠವಳೆ, ಸೂಳಬೆಟ್ಟು
ಬೆಳ್ತಂಗಡಿ, ಜು 06 (Daijiworld News/MSP): ಲಾಕ್ಡೌನ್ ಸಂದರ್ಭ ಅನೇಕ ಕ್ರಿಯಾತ್ಮಕ ಚಟುವಟಿಕೆಗಳು ನಡೆದಿರುವುದನ್ನು ನಾವು ಗಮನಿಸಿದ್ದೇವೆ. ಇಲ್ಲೊಬ್ಬ ವಿದೇಶಿ ಪ್ರಜೆ ತನ್ನ ದೇಶಕ್ಕೆ ಮರಳಲು ಸಾಧ್ಯವಾಗದಿರುವ ಸಂದರ್ಭವನ್ನು ಕನ್ನಡ ಕಲಿಯಲು ಉಪಯೋಗಿಸಿರುವುದು ಅಚ್ಚರಿಪಡುವಂತಾಗಿದೆ.

ಒಂದು ವರ್ಷದ ಪ್ರವಾಸೀ ವೀಸಾದಲ್ಲಿ ಭಾರತ ಪ್ರವಾಸಕ್ಕೆ ಬಂದ 25 ವರ್ಷದ ಫ್ರೆಂಚ್ ಪ್ರಜೆ ಬ್ಯಾಪ್ಟಿಸ್ಟ್ ಮರಿಯೋಟ್ ಬೆಳ್ತಂಗಡಿಯ ಮುಂಡಾಜೆಯೆಂಬ ಹಳ್ಳಿಯಲ್ಲಿನ ಬಾಡಿಗೆ ಕೋಣೆಯೊಂದರಲ್ಲಿ ಉಳಿಯಬೇಕಾಗಿ ಬಂತು. ಮಾರ್ಚ್ ಅಂತ್ಯದೊಳಗೆ ಹಿಂತಿರುಗಬೇಕಾಗಿದ್ದ ಅವರು ಅನಿರೀಕ್ಷಿತ ಲಾಕ್ಡೌನ್ನಿಂದಾಗಿ ಸಿಲುಕಿಕೊಂಡಾಗ ಕನ್ನಡ ಭಾಷೆಯನ್ನು ಕಲಿಯುವತ್ತ ಮನಸ್ಸು ಮಾಡಿ ಇದೀಗ ಕನ್ನಡ ಪುಸ್ತಕಗಳನ್ನು ಓದುವ ಹಂತಕ್ಕೆ ಬಂದಿರುವುದು ವಿಶೇಷವೇ ಸರಿ. ಮುಂಡಾಜೆಯ ಕೃಷಿಕರಾದ ಅಜಿತ್ ಭಿಡೆ ಹಾಗು ಸಚಿನ್ ಭಿಡೆ ಕನ್ನಡ ಕಲಿಸುವಲ್ಲಿ ಪೂರ್ತಿ ಸಹಕಾರ ನೀಡಿದ್ದಾರೆ
ಇವರು ಮೂಲತಃ ಕಲಾವಿದ. ಫ್ರಾನ್ಸ್ನ ಫ್ಲೋರೆನ್ಸ್ ಅಕಾಡೆಮಿ ಆಫ್ ಆರ್ಟ್ಸ್ನ ವಿದ್ಯಾರ್ಥಿ. ಸ್ಪೈನ್ನ ಒಂದು ಕಲಾಶಾಲೆಯ ಶಿಕ್ಷಕ ಅನುಭವಿ ಸ್ಯಾಕ್ಸೋಫೋನ್ ಕಲಾವಿದ ಮೈಕಲ್ ಮಿಷೆಲ್ ಎಂಬುವರಿಂದ ಮುಂಡಾಜೆಯ ಬಗ್ಗೆ ಮಾಹಿತಿ ಸಿಕ್ಕಿತು. ನಾನು ೨೦೧೭ ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ಬಂದಾಗ ಹಿಂದಿ ಭಾಷೆಯ ಬಗ್ಗೆ ತಿಳಿದುಕೊಂಡೆ. ಹಚ್ಚಿನ ಭಾರತೀಯರು ಹಿಂದಿ ಭಾಷೆಯೆನ್ನೇ ಮಾತನಾಡುತ್ತಾರೆ ಎಂದು ಭಾವಿಸಿದ್ದೆ. ಆದರೆ ಈ ಹಳ್ಳಿಗೆ( ಮುಂಡಾಜೆ) ಬಂದಾಗ ಕನ್ನಡ ಭಾಷೆಯೂ ಒಂದಿದೆ. ಅದನ್ನೂ ಕಲಿಯುವ ಅವಶ್ಯಕತೆಯನ್ನು ಮನಗಂಡೆ. ಸನಿಹದ ನಿವಾಸಿ ಸಚಿನ್ ಭಿಡೆ ಕನ್ನಡವನ್ನು ಕಲಿಸುತ್ತಿದ್ದಾರೆ. ಲಾಕ್ ಡೌನ್ ಘೋಷಣೆಯಾದಾಗ ಯಾವಾಗ ಹಿಂದಿರುಗುವೆನೋ ಅಂತ ಅಂದು ಕೊಂಡಿದ್ದೆ. ಆದರೆ ಅದು ವಿಸ್ತರಣೆಯಾದಾಗ ಮತ್ತು ಅಂತಾರಾಷ್ಟ್ರೀಯ ವಿಮಾನಯಾನ ರದ್ದಾದಾಗ ಅದು ನನ್ನ ಕನ್ನಡ ಭಾಷೆಯ ಜ್ಞಾನವನ್ನು ಪಡೆಯಲು ಅನುಕೂಲವಾಯಿತು ಎಂದು ಮರಿಯೋಟ್ ಫೆಂಚ್ ಶೈಲಿಯ ಕನ್ನಡದಲ್ಲೇ ಹೇಳುತ್ತಾರೆ.
ಕನ್ನಡ ಕಲಿಯುತ್ತಿರುವ ಸಂದರ್ಭದಲ್ಲಿ ಕೃಷಿಕ, ಸಹ್ಯಾದ್ರಿ ಸಂಚಯದ ಸದಸ್ಯ ಸಚಿನ್ ಭಿಡೆಯವರು ಕನ್ನಡದ ಜೊತೆಗೆ ದಕ್ಷಿಣ ಕನ್ನಡದ ವಿವಿಧ ಖಾದ್ಯಗಳನ್ನೂ ಪರಿಚಯಿಸಿದ್ದಾರೆ. ಹೀಗಾಗಿ ಇಲ್ಲಿಂದ ಹೊರಡಲೂ ಮನಸ್ಸಾಗುತ್ತಿಲ್ಲಾ ಎನ್ನುತ್ತಾರೆ ಅವರು. ಈ ಮಧ್ಯೆ ಭಿಡೆಯವರ ದೋಸ್ತಿ ಧನುಷ್ ರಾಜೇಂದ್ರ ಇವರಿಗೆ ಡ್ರಮ್ಸ್ ವಾದವನ್ನು ಕಲಿಸುತ್ತಿರುವ ಮರಿಯೋಟ್ ಅವರಿಂದಲೂ ಕನ್ನಡವನ್ನು ಅಭ್ಯಸಿಸುತ್ತಿದ್ದಾರೆ.
ಕಲಾವಿದ ಕುಟುಂಬದ ಮರಿಯೋಟ್ ಡ್ರಮ್ಸ್ ಕಲೆಯ ಜೊತೆಗೆ ಛಾಯಾಚಿತ್ರಕಾರರೂ ಹೌದು. ಪ್ರರ್ವತ ಶ್ರೇಣಿಗಳ, ಹಸಿರು ಕಾನನಗಳ ಭಾವಚಿತ್ರಕಾರ. ಚಾರ್ಮಾಡಿ ಕಣಿವೆಯ ಮನಮೋಹಕ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದನ್ನು ಇಷ್ಟ ಪಡುತ್ತಾರೆ. ಮಳೆಗಾಲ ಅಂದರೆ ಅವರಿಗೆ ತುಂಬಾ ಪ್ರೀತಿ. ಫ್ರೆಂಚ್ನ ಜೊತೆಗೆ ಇಟಾಲಿಯನ್, ಸ್ಪಾನಿಷ್, ಇಂಗ್ಲೀಷ್ ಹಾಗು ಕನ್ನಡವನ್ನು ಸರಾಗವಾಗಿ ಮಾತನಾಡಬಲ್ಲರು. ಹಿಂದಿಯ ಬಗ್ಗೆಯೂ ಮಾಹಿತಿ ಅವರಿಗಿದೆ ಎನ್ನುತ್ತಾರೆ ಸಚಿನ್ ಭಿಡೆ