ಬೈಂದೂರು, ಜು 06 (Daijiworld News/MSP): ಕೊರೊನಾದ ನಡುವೆಯೂ ದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರುತ್ತಿದ್ದು ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂದು ದೇಶದಲ್ಲಿ ಆರ್ಥಿಕ ಕುಸಿತ, ನಿರುದ್ಯೋಗ ಸಮಸ್ಯೆ ಕಾಡುತ್ತಿದ್ದು ಈ ನಡುವೆ ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಳ ಮಾಡುತ್ತಿರುವ ಕೇಂದ್ರ ಸರ್ಕಾರದ ನಿಲುವನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದು ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದ್ದಾರೆ.



ಅವರು ಜು.6ರಂದು ಬೈಂದೂರು ಮತ್ತು ವಂಡ್ಸೆ ಬ್ಲಾಕ್ ವತಿಯಿಂದ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆ ಏರಿಕೆ ಹಾಗೂ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಕುಸಿದಿದ್ದರೂ ಕೂಡಾ ಕೇಂದ್ರ ಸರ್ಕಾರ ಇಂತಹ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡುತ್ತಿದೆ. ಕೇಂದ್ರ ಸರ್ಕಾರದ ಈ ಜನವಿರೋಧಿ ನೀತಿಯನ್ನು ಕಾಂಗ್ರೆಸ್ ಬಲವಾಗಿ ಖಂಡಿಸುತ್ತದೆ. ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಎಸ್.ರಾಜು ಪೂಜಾರಿ, ಪ್ರಕಾಶ್ಚಂದ್ರ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ತಹಶೀಲ್ದಾರರ ಮೂಲಕ ಮನವಿಯನ್ನು ರಾಷ್ಟ್ರಪತಿಗಳಿಗೆ ತಲುಪಿಸಲಾಯಿತು.
ವಂಡ್ಸೆ: ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದರು. ವಂಡ್ಸೆ ಬ್ಲಾಕ್ ಮಾಜಿ ಅಧ್ಯಕ್ಷ ಸಂಪಿಗೇಡಿ ಸಂಜೀವ ಶೆಟ್ಟಿ, ಜಿ.ಪಂ. ಸದಸ್ಯೆ ಜ್ಯೋತಿ ಎಂ., ತಾ.ಪಂ.ಸದಸ್ಯ ಉದಯ ಜಿ.ಪೂಜಾರಿ, ಮಾಜಿ ಜಿ.ಪಂ.ಸದಸ್ಯ ಎಚ್.ಮಂಜಯ್ಯ ಶೆಟ್ಟಿ, ಪಕ್ಷದ ಮುಖಂಡರಾದ ಸಂತೋಷ ಕುಮಾರ್ ಶೆಟ್ಟಿ ಹಕ್ಲಾಡಿ, ನಾಗಪ್ಪ ಕೊಠಾರಿ, ಶರತ್ ಕುಮಾರ್ ಶೆಟ್ಟಿ, ಕಿರಣ್ ಹೆಗ್ಡೆ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕರ್ಕಿ, ಬೈಂದೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ದೇವಾಡಿಗ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ಬಳಿಕ ವಂಡ್ಸೆ ನಾಡ ಕಛೇರಿಯ ಕಂದಾಯ ಅಧಿಕಾರಿಗಳ ಮೂಲಕ ಮನವಿಯನ್ನು ರಾಷ್ಟ್ರಪತಿಗಳಿಗೆ ತಲುಪಿಸಲಾಯಿತು.