ಮಂಗಳೂರು ಏ 10 : ಮೋದಿಯ ಮನ್ ಕೀ ಬಾತ್ ಜನರಿಗೆ ಬೇಕಾಗಿಲ್ಲ, ಜನರ ಮನ್ ಕೀ ಬಾತ್ ನ್ನು ಕಾಂಗ್ರೆಸ್ ಪಕ್ಷ ಕೇಳುತ್ತದೆ ಎಂದು ರಮಾನಾಥ ರೈ ಹೇಳಿದರು. ಅವರು ಏ. 10 ರ ಮಂಗಳವಾರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಅವರು ಬಿಜೆಪಿ ಪಕ್ಷದ ವಿರುದ್ದ ಹರಿಹಾಯ್ದಿದರು. ಬಿಜೆಪಿ ಪಕ್ಷವೂ ಮತೀಯ ಭಾವನೆಯನ್ನು ಕೆರಳಿಸುವ ಹುನ್ನಾರ ನಡೆಸುತ್ತಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಇದಲ್ಲದೆ ಪಕ್ಷದೊಳಗೆ ಅಸಮಾಧಾನದ ಹೊಗೆಯಾಡುತ್ತಿದೆ. ಅಭ್ಯರ್ಥಿಗಳ ಪಟ್ಟಿ ಹೊರ ಬೀಳುತ್ತಿದ್ದಂತೆ ಬಿಜೆಪಿಯಲ್ಲಿ ಅತೃಪ್ತಿಯ ರಾಜಕೀಯ ಬೆಳವಣಿಗೆ ನಡೆಯಲಿದೆ. ಅಲ್ಲದೆ ಬಿಜೆಪಿಯಲ್ಲಿರುವ ಜಿಲ್ಲೆಯ ಹಲವು ಆಕ್ಷಾಂಕ್ಷಿ ಆಭ್ಯರ್ಥಿಗಳು ನಮ್ಮ ಸಂಪರ್ಕದಲ್ಲಿದ್ದಾರೆ. ಬಿಜೆಪಿಯ ಅಂತಿಮ ಅಭ್ಯರ್ಥಿಗಳ ಪಟ್ಟಿ ಹೊರ ಬೀಳುತ್ತಿದ್ದಂತೆ, ಕಾದು ನೋಡಿ ಇನ್ನಷ್ಟು ಬಿಜೆಪಿ ನಾಯಕರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಭವಿಷ್ಯ ನುಡಿದರು. ಕಾಂಗ್ರೆಸ್ ನಲ್ಲಿ ಅಭ್ಯರ್ಥಿ ವಿಚಾರದಲ್ಲಿ ಯಾವುದೇ ಅತೃಪ್ತಿ, ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದ ರಮಾನಾಥ ರೈ ಈ ಬಾರಿ ಕಾಂಗ್ರೆಸ್ ಜಿಲ್ಲೆಯ 8 ಕೇತ್ರಗಳನ್ನು ಗೆಲ್ಲುವುದು ಶತಸಿದ್ದ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಗ್ಯಾಸ್ ದರ 800 ರೂ ಆಗಿದ್ದು ಇದು ಹಗಲು ದರೋಡೆ ಎಂದು ಕಿಡಿ ಕಾರಿದರು. ಅಲ್ಲದೆ ಜಿಎಸ್ಟಿ, ನೋಟ್ ಬ್ಯಾನ್ನಿಂದ ಜನರಿಗೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಬಿಜೆಪಿಯು ಕೊಟ್ಟ ಭರವಸೆಗಳೆಲ್ಲಾ ಸುಳ್ಳಾಗಿದೆ. ಹೀಗಾಗಿ ಜನ ಬಿಜೆಪಿ ಆಡಳಿತದ ಕೇಂದ್ರ ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ ಎಂದರು .
ಆರ್ ಎಸ್ ಎಸ್ ಮುಖಂಡ ಪ್ರಬಾಕರ್ ಭಟ್ ಅವರ ಭೂತ ಕಟ್ಟುವವನಿಗೆ ತಲೆ ಸರಿಯಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ರಮಾನಾಥ ರೈ ಇದು ದೈವದ ಅಸ್ತಿತ್ವವನ್ನೇ ಪ್ರಶ್ನೆ ಮಾಡಿದಂತಾಗಿದೆ ಎಂದರು. ದೊಡ್ಡ ಹಿಂದುತ್ವವಾದಿಯಾಗಿ ದೈವದ ನಂಬಿಕೆಯನ್ನು ಪ್ರಶ್ನೆ ಮಾಡಿದ್ದಾರೆ. ದೈವಾರಾಧನೆ ಒಂದು ನಂಬಿಕೆ, ಭೂತ ಕಟ್ಟುವವನು ಪ್ರಸಾದ ನೀಡುವುದಿಲ್ಲ, ಬದಲಿಗೆ ದೈವದ ರೂಪದಲ್ಲಿ ಪ್ರಸಾದ ನೀಡುವುದನ್ನು ಇವರು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಕೇವಲ ಓಟಿಗಾಗಿ ಇಂಥ ಮಾತನಾಡಿದ್ದಾರೆ ಎನ್ನುವುದು ಇದರಿಂದ ಸ್ಪಷ್ಟವಾಗಿದೆ ಎಂದು ರಮಾನಾಥ ರೈ ಹೇಳಿದರು.