ಮಂಗಳೂರು, ಜು 07 (DaijiworldNews/PY): ಮನೆ ಮೇಲೆ ಗುಡ್ಡ ಕುಸಿದು ಮಣ್ಣಿನ ಅಡಿಯಲ್ಲಿ ಸಿಲುಕಿ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ನಡೆದ ಗುರುಪುರ ಗ್ರಾಮ ಪಂಚಾಯಿತಿಯ ಬಂಗ್ಲ ಗುಡ್ಡೆ, ಮಠದ ಗುಡ್ಡೆ ಪ್ರದೇಶದಲ್ಲಿ ವಾಸವಾಗಿದ್ದ ಸುಮಾರು 100 ಮನೆಗಳ ನಿವಾಸಿಗಳು ತಮ್ಮ ಮನೆಯನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ.

ಅಪಾಯದಲ್ಲಿರುವ ಪ್ರದೇಶವನ್ನು ರೆಡ್ ಝೋನ್ ಹಾಗೂ ಯೆಲ್ಲೋ ಝೋನ್ ಎಂದು ವಿಂಗಡಣೆ ಮಾಡಲಾಗಿದೆ. ಸುಮಾರು 40 ಮನೆಗಳು ರೆಡ್ ಝೋನ್ನಲ್ಲಿವೆ, ಹಾಗೂ 80 ಮನೆಗಳು ಯೆಲ್ಲೋ ಝೋನ್ನಲ್ಲಿವೆ. ರೆಡ್ ಝೋನ್ನಲ್ಲಿರುವ ಮನೆಯ ಕುಟುಂಬಗಳನ್ನು ಶಾಶ್ವತವಾಗಿ ಹಾಗೂ ಯೆಲ್ಲೋ ಝೋನ್ನಲ್ಲಿರುವ ಮನೆಯ ಕುಟುಂಬಗಳನ್ನು ತಾತ್ಕಲಿಕವಾಗಿ ಒಂದು ತಿಂಗಳ ಅವಧಿಗೆ ತೆರವು ಮಾಡುವುದಾಗಿ ನಿರ್ಧಾರಿಸಲಾಗಿದೆ. ಹಾಗೂ ಸುಮಾರು ಎಂದು ಅಂದಾಜು ಮಾಡಲಾಗಿದೆ.
ಸ್ಥಳಾಂತರಗೊಂಡ ಜನರಿಗೆ ತಾತ್ಕಾಲಿಕ ವಾಸ್ತವ್ಯಕ್ಕಾಗಿ ಗುರುಪುರ ಹಿಂದೂ ಹಿರಿಯ ಪ್ರಾಥಮಿಕ ಶಾಲೆ, ಸರಕಾರಿ ಪ.ಪೂ.ಕಾಲೇಜು ಹಾಗೂ ಬಿಸಿಎಂ ಹಾಸ್ಟೆಲ್ಗಳಲ್ಲಿ ಗಂಜಿಕೇಂದ್ರಗಳನ್ನು ಆರಂಭಮಾಡಲಾಗಿದೆ. ಈ ಪೈಕಿ ಕೆಲವು ಗಂಜಿಕೇಂದ್ರದಲ್ಲಿ ಉಳಿದುಕೊಂಡರೆ, ಇನ್ನು ಕೆಲವರು ತಮ್ಮ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಬಾಡಿಗೆ ಮನೆಯಲ್ಲಿ ಉಳಿದುಕೊಳ್ಳಲು ಸುಮಾರು 35 ಕುಟುಂಬಗಳು ತೀರ್ಮಾನ ಮಾಡಿದ್ದು, ಈ ಸಲುವಾಗಿ ಬಾಡಿಗೆ ಮನೆಗಳಲ್ಲಿ ವಾಸಿಸುವ ನಿವಾಸಿಗಳಿಗೆ ಬಾಡಿಗೆಗೆ 2,500 ರೂ.ಗಳನ್ನು ಪಾವತಿಸಲು ಕಂದಾಯ ಇಲಾಖೆ ನಿರ್ಧರಿಸಿದೆ.
ಘಟನೆಯಲ್ಲಿ ಗಾಯಗೊಂಡ ಶಾಹಿದಾ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.