ಮಂಗಳೂರು, ಜು 07 (Daijiworld News/MSP): ಮಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ, ಮಂಗಳೂರು, ಪುತ್ತೂರು ಮೊದಲಾದ ಕಡೆ ಕರ್ನಾಟಕದ ವಿವಿಧೆಡೆ ಪ್ರತಿನಿತ್ಯ ಉದ್ಯೋಗ ನಿಮಿತ್ತ ಹೋಗಿ ಬರುತ್ತಿದ್ದವರು ಇನ್ನು ಹಾಗೆ ಮಾಡುವಂತಿಲ್ಲ ಒಮ್ಮೆ ಕರ್ನಾಟಕಕ್ಕೆ ಹೋದರೆ ಮುಂದಿನ ೨೮ ದಿನ ಅಲ್ಲೇ ಇರಬೇಕು ಎಂಬ ಕೇರಳ ಸರಕಾರ ನಿಯಮ ಗೊಂದಲಕ್ಕೆ ಕಾರಣವಾಗಿದೆ.

ಸಾಂದರ್ಭಿಕ ಚಿತ್ರ
ಡೈಲಿ ಪಾಸ್ ಮೂಲಕ ನಿತ್ಯವೂ ಕೆಲಸಕ್ಕೆ ಬರುತ್ತಿದ್ದವರನ್ನು ಕೇರಳ ಪೊಲೀಸರು ತಲಪಾಡಿಯಲ್ಲಿ ತಡೆಹಿಡಿದಿರುವುದರಿಂದ ಸ್ಥಳದಲ್ಲಿ ಜಮಾಯಿಸಿದ ಸುಮಾರು 100 ಕ್ಕೂ ಅಧಿಕ ಮಂದಿ ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿದಿದ್ದು ಇದೀಗ ಬಿಗುವಿನ ವಾತಾವರಣ ನಿರ್ಮಾಣ ಆಗಿದೆ.
ಕೇರಳ ಸರ್ಕಾರವೂ ವೈದ್ಯರ ಸಹಿತ ಆರೋಗ್ಯ ಕಾರ್ಯಕರ್ತರಿಗೂ ಅನ್ವಯವಾಗುವಂತೆ ಆದೇಶ ಹೊರಡಿಸಿದ್ದು ಅನಾವಶ್ಯಕ ಪ್ರಯಾಣ ತಡೆಯುವ ನಿಟ್ಟಿನಲ್ಲಿ ಗಡಿ ರಸ್ತೆಯಲ್ಲಿ ಬ್ಯಾರಿಕೆಡ್ ಇರಿಸಿ ನಿರ್ಬಂಧ ಹೇರಲಾಗಿದೆ.
ಆದರೆ ದ.ಕ ಜಿಲ್ಲಾಡಳಿತವೂ ಜು.11 ರ ಪಾಸ್ ನೀಡಿದ್ದು ಅಲ್ಲಿಯವರೆಗೆ ಮಂಗಳೂರಿಗೆ ಬರುವ ಮಂದಿ ಕೇರಳದ ಉದ್ಯೋಗಿಗಳನ್ನು ತಡೆಯಬಾರದು ಎಂದು ಜನರು ಪೊಲೀಸರನ್ನು ಒತ್ತಾಯಿಸಿದ್ದಾರೆ. ಆದರೆ ಮಂಗಳೂರಿಗೆ ಪ್ರಯಣಿಸುತ್ತಿದ್ದ ಐದು ಮಂದಿಯಲ್ಲಿ ಕೋವಿಡ್ ಪತ್ತೆಯಾದ ಹಿನ್ನೆಲೆಯಲ್ಲಿ ಕೇರಳ ಸರಕಾರದ ಕಠಿಣ ಆದೇಶ ಇರುವುದರಿಂದ ಮಂಗಳೂರಿಗೆ ಹೋದಲ್ಲಿ ಅಲ್ಲಿಯೇ ಉಳಿದುಕೊಳ್ಳಿ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ.
ಇದರಿಂದ ಪೊಲೀಸರ ಹಾಗೂ ಜನರ ನಡುವೆ ವಾಗ್ವಾದ ನಡೆದಿದ್ದು ಸ್ಥಳದಲ್ಲಿ ಬಿಗು ವಾತಾವರಣ ನಿರ್ಮಾಣ ಆಗಿದೆ. ಹೆಚ್ಚುವರಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.