ಮಂಗಳೂರು, ಏ 10 : ಕುಂದಾಪುರದ ಇಂಜಿನಿಯರ್ ರವಿಶಂಕರ್ ಅವರ ಮನೆ ಮತ್ತು ಕಚೇರಿಯ ಮೇಲೆ ಎಸಿಬಿ ಏ.10ರ ಬೆಳಿಗ್ಗೆ 6 ಗಂಟೆಗೆ ದಾಳಿ ಮಾಡಿದೆ. ದೂರು ಬಂದಿರುವ ಹಿನ್ನೆಲೆಯಲ್ಲಿ ಎಸಿಬಿ ತಂಡ ಮಿಂಚಿನ ದಾಳಿ ಮಾಡಿದ್ದು ಕುಂದಾಪುರದ ನಾನಾ ಸಾಹೇಬ್ ರಸ್ತೆಯಲ್ಲಿರುವ ರವಿಶಂಕರ್ ಅವರ ಮನೆ ಹಾಗೂ ಕಾಲೇಜು ರಸ್ತೆಯಲ್ಲಿರುವ ಕಚೇರಿಯ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.
ಇಂಜಿನಿಯರ್ ರವಿಶಂಕರ್
ರವಿಶಂಕರ್ ಅವರು ಸರ್ಕಾರಿ ಕ್ವಾರ್ಟಸ್ನ್ನೇ ಕಚೇರಿಯನ್ನಾಗಿ ಮಾಡಿಕೊಂಡಿದ್ದಾರೆ ಎನ್ನುವ ಆರೋಪವಿತ್ತು. ಸಾರ್ವಜನಿಕ ವಲಯದಲ್ಲಿ ಇವರ ಕಾರ್ಯವೈಖರಿ ಬಗ್ಗೆಯೂ ಅಸಮಾಧಾನವಿದ್ದು, ವ್ಯಕ್ತಿಯೋರ್ವರು ಎಸಿಬಿಗೆ ಖಚಿತ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಬೆಳಿಗ್ಗೆಯಿಂದ ಕಛೇರಿ ಮತ್ತು ಮನೆಗಳಲ್ಲಿ ಪರಿಶೀಲನೆ ನಡೆಯುತ್ತಿದ್ದು, ಸಂಜೆ ವೇಳೆ ನಿಖರ ಮಾಹಿತಿ ಸಿಗಲಿದೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಕಾರವಾರದಲ್ಲಿರುವ ರವಿಶಂಕರ್ ಮಾವನ ಮನೆಯ ಮೇಲೂ ಎಸಿಬಿ ದಾಳಿ ಮಾಡಲಾಗಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಎಸ್ಪಿ ಶ್ರುತಿ, ಡಿವೈಎಸ್ಪಿ ದಿನಕರ ಶೆಟ್ಟಿ, ಸುಧೀರ ಹೆಗ್ಡೆ, ಉಡುಪಿ ಎಸ್.ಐ ಜಯರಾಮ ಗೌಡ, ಸರ್ಕಲ್ ಸುರೇಶ ದಾಳಿಯಲ್ಲಿ ಭಾಗವಹಿಸಿದ್ದರು.
ಇದಲ್ಲದೆ ಕುಂದಾಪುರ ಸೇರಿದಂತೆ ರಾಜ್ಯದಲ್ಲಿ ಅಕ್ರಮ ಆಸ್ತಿ-ಪಾಸ್ತಿ ಹೊಂದಿದ್ದಾರೆಂಬ ಎಂಬ ಖಚಿತ ಮಾಹಿತಿ ಪಡೆದ ಕರ್ನಾಟಕ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಮಂಗಳವಾರ 22 ಸ್ಥಳಗಳ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಆರು ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದಿದ್ದಾರೆ. ಹುಬ್ಬಳ್ಳಿಯ ಕೆಪಿಟಿಸಿಎಲ್ ಕಚೇರಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ್ ಎನ್. ಸವಣೂರ, ಬೆಂಗಳೂರಿನ ಕನಕಪುರ ರಸ್ತೆಯ ತಲಘಟ್ಟಪುರ ಬಿಬಿಎಂಪಿ ಕಚೇರಿ ವಾರ್ಡ್ ಸಂಖ್ಯೆ 198ರ ಕಂದಾಯ ನಿರೀಕ್ಷಕರಾದ ಶಿವಕುಮಾರ್ ಜಿಎಂ, ಮೈಸೂರಿನ ಮೈಸೂರು ಸಿಟಿ ಕಾರ್ಪೋರೇಶನ್ನ ವಾಟರ್ ಇನ್ಸ್ಪೆಕ್ಟರ್ ಕೃಷ್ಣೇಗೌಡ ಟಿ.ಎಸ್ ಮುಂತಾದ ಭ್ರಷ್ಟ ಅಧಿಕಾರಿಗಳ ಕಚೇರಿ ಹಾಗೂ ಮನೆ ಮೇಲೆ ಎಸಿಬಿ ದಾಳಿ ನಡೆಸಿದೆ.