ಕುಂದಾಪುರ, ಏ 10 : ಹೇರಿಕುದ್ರು ಗ್ರಾಮಸ್ಥರು ಕುಡಿಯುವ ನೀರಿನ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೇರಿಕುದ್ರುವಿನ ಅಂಡರ್ಪಾಸ್ ಬಳಿ ಮಂಗಳವಾರ ಕೈಗೊಂಡ ಪ್ರತಿಭಟನೆಯು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ರಾಜಕೀಯ ಮೇಲಾಟಕ್ಕೆ ಸಾಕ್ಷಿಯಾಗಿದ್ದು, ಇದರಿಂದ ಬೇಸತ್ತ ಜನರು, ನಮಗೆ ನೀರು ಸಿಗದಿದ್ದರೆ ಚುನಾವಣೆಯನ್ನೇ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಆನಗಳ್ಳಿ ಗ್ರಾ.ಪಂ. ವ್ಯಾಪ್ತಿಯ ಹೇರಿಕುದ್ರುವಿನ ಗ್ರಾಮಸ್ಥರಿಗೆ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿಯಿಂದಾಗಿ ಪೈಪ್ಲೈನ್ ಕಡಿತಗೊಂಡಿದ್ದು, ಇದರಿಂದ ಕಳೆದ ಒಂದೂವರೆ ತಿಂಗಳಿನಿಂದ ಈ ಭಾಗದಲ್ಲಿ ಜನರಿಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಹೆದ್ದಾರಿ ಬದಿಯಿದ್ದ ಪೈಪ್ಲೈನ್ನನ್ನು ಬದಲಿಸಿ, ಬೇರೆಡೆ ಪೈಪ್ಲೈನ್ ಕಲ್ಪಿಸಿ ನಮಗೆ ನೀರು ಒದಗಿಸಿ ಎಂದು ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ಹಮ್ಮಿಕೊಂಡಿದ್ದರು.
ರಾಜಕೀಯ ಬೇಡ, ನೀರು ಬೇಕು
ಕೇವಲ ಓಟಿಗಾಗಿ ಮಾತ್ರ ಜನರ ಬಳಿಗೆ ಬರುವ ನಿಮ್ಮ ಈ ಕೊಳಕು ರಾಜಕೀಯ ಯಾರಿಗೆ ಬೇಕು. ನಮಗೆ ಈ ಕೆಟ್ಟ ರಾಜಕೀಯ ಬೇಡ. ನಮಗೆ ಕುಡಿಯುವ ನೀರಿನ ಪೂರೈಕೆ ಆಗಬೇಕು. ನಾವೆಲ್ಲ ರಾಜಕೀಯ ಪಕ್ಷದ ಬೆಂಬಲದಿಂದ ಪ್ರತಿಭಟನೆ ನಡೆಸುತ್ತಿರುವುದಲ್ಲ. ನೀರಿಗಾಗಿ ಮಾತ್ರ ನಾವು ಹೋರಾಟ ಮಾಡುತ್ತಿರುವುದು ಎನ್ನುವುದು ಅಲ್ಲಿ ಸೇರಿದ್ದ ಗ್ರಾಮಸ್ಥರ ಒಕ್ಕೊರಲ ಬೇಡಿಕೆ.