ಉಡುಪಿ, ಜು. 07 (DaijiworldNews/MB) : ''ಕೊರೊನಾದ ಯಾವುದೇ ಲಕ್ಷಣ ಕಂಡು ಬಂದಲ್ಲಿ ನಿರ್ಲಕ್ಷ್ಯ ಬೇಡ, ಆತಂಕಕ್ಕೂ ಒಳಗಾಗಬೇಡಿ. ನಿಮ್ಮ ಜೀವವನ್ನು ರಕ್ಷಿಸುವುದೇ ನಮ್ಮ ಆದ್ಯತೆ. ಗಂಟಲು ದ್ರವ ಪರೀಕ್ಷೆಯನ್ನು ಉಚಿತವಾಗಿ ಮಾಡಿಸಲಾಗುತ್ತದೆ. ಹಾಗೆಯೇ ಕೊರೊನಾ ಪಾಸಿಟಿವ್ ಬಂದಲ್ಲಿ ಚಿಕಿತ್ಸೆಯನ್ನೂ ಉಚಿತವಾಗಿ ನೀಡಲಾಗುವುದು'' ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ತಿಳಿಸಿದ್ದಾರೆ.

''ಕೊರೊನಾ ಸೋಂಕು ಸಂದರ್ಭದಲ್ಲೇ ಮಳೆಗಾಲ ಬಂದಿದ್ದು ಯಾವುದೇ ಜ್ವರ, ಶೀತ, ಉಸಿರಾಟ ಸಮಸ್ಯೆ ಇದ್ದಲ್ಲಿ ಮನೆಯಲ್ಲಿಯೇ ಮದ್ದು ಮಾಡಿ ಕೂರಬೇಡಿ. ಫೀವರ್ ಕ್ಲಿನಿಕ್ಗೆ ಭೇಟಿ ನೀಡಿ ಚಿಕಿತ್ಸೆಗೆ ನಾವು ವ್ಯವಸ್ಥೆ ಮಾಡುತ್ತೇವೆ. ರೋಗದ ಲಕ್ಷಣವಿದ್ದರೆ ಅಧಿಕಾರಿಗಳಿಗೆ ತಿಳಿಸಿ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ. ಕಷ್ಟವಾದಲ್ಲಿ ನಾವೇ ಪರೀಕ್ಷೆ ಮಾಡಿಸುತ್ತೇವೆ. ಯಾವುದೇ ನಿರ್ಲಕ್ಷ್ಯ ಬೇಡ. ಹಾಗೆಯೇ ಆಶಾ ಕಾರ್ಯಕರ್ತೆಯರು ಮನೆಗೆ ಬಂದಾಗ ಅವರಿಗೆ ಸರಿಯಾದ ಮಾಹಿತಿ ನೀಡಿ'' ಎಂದು ಮನವಿ ಮಾಡಿದ್ದಾರೆ.
ಇನ್ನು ''ಕೆಲವು ಸಂಘಟನೆಗಳು ಕೊರೊನಾ ವಾರಿಯರ್ಸ್ಗೆ ಸನ್ಮಾನ ಮಾಡಲು ಮುಂದಾಗಿದೆ. ಆದರೆ ಈ ಸಂದರ್ಭದಲ್ಲಿ ಅದು ಬೇಡ. ಸೋಂಕು ನಿಯಂತ್ರಣಕ್ಕೆ ಬಂದ ಬಳಿಕ ಸನ್ಮಾನ ಮಾಡಬಹುದು'' ಎಂದು ಹೇಳಿದ್ದಾರೆ.