ಉಡುಪಿ, ಜು. 07 (DaijiworldNews/MB) : ಜಿಲ್ಲೆಯ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಲ್ಯಾಬ್ ನಿರ್ಮಾಣ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಕಾರ್ಯಾರಂಭ ಮಾಡಲು ಸಜ್ಜಾಗಿದೆ.







ಆಧುನಿಕ ಪ್ರಯೋಗಾಲಯ ಯಂತ್ರಗಳು ಮತ್ತು ಒಂದು ಕೋಟಿ ರೂಪಾಯಿ ಮೌಲ್ಯದ ಉಪಕರಣಗಳನ್ನು ಪ್ರಯೋಗಾಲಯದಲ್ಲಿ ಅಳವಡಿಸಲಾಗಿದೆ. ನಿರ್ಮಾಣ ವೆಚ್ಚ 45 ಲಕ್ಷ ರೂಪಾಯಿಯಾಗಿದ್ದು ಸೂಕ್ಷ್ಮ ಜೀವಶಾಸ್ತ್ರಜ್ಞ ಮತ್ತು ಎಂಟು ಲ್ಯಾಬ್ ತಂತ್ರಜ್ಞರನ್ನು ನೇಮಿಸಲಾಗಿದೆ. ಮೈಕ್ರೋಬಯಾಲಜಿಸ್ಟ್ ಮತ್ತು ಇಬ್ಬರು ಲ್ಯಾಬ್ ತಂತ್ರಜ್ಞರು ನಿಮ್ಹಾನ್ಸ್ನಲ್ಲಿ ತರಬೇತಿ ಪಡೆದವರಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಮಧುಸೂದನ್ ನಾಯಕ್ ಅವರು, ನಿಮ್ಹಾನ್ಸ್ನಿಂದ ಐದು ಮಾದರಿಗಳನ್ನು ಪ್ರಯೋಗಕ್ಕಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ವರದಿಗಳನ್ನು ಹಿಂದಕ್ಕೆ ಕಳುಹಿಸಲಾಗಿದೆ. ನಿಮ್ಹಾನ್ಸ್ನಿಂದ ಬಂದ ವರದಿಯನ್ನು ಪರಿಶೀಲಿಸಿದ ನಂತರ, ಹೊಸದಾಗಿ ಸ್ಥಾಪಿಸಲಾದ ಪ್ರಯೋಗಾಲಯದಲ್ಲಿ ಪರೀಕ್ಷೆಗಳು ಪ್ರಾರಂಭವಾಗುತ್ತವೆ. ಇನ್ನು ಎರಡು ದಿನದಲ್ಲಿ ವರದಿಗಳು ಬರುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
ಲ್ಯಾಬ್ ಸಂಪೂರ್ಣವಾಗಿ ಹವಾನಿಯಂತ್ರಿತವಾಗಿದೆ ಮತ್ತು ಏಕಕಾಲಕ್ಕೆ 96 ಮಾದರಿಗಳನ್ನು ಪರೀಕ್ಷಿಸಬಹುದು. ಪರೀಕ್ಷಾ ವರದಿಗಳು ಬರಲು ನಾಲ್ಕರಿಂದ ಆರು ಗಂಟೆಗಳ ಸಮಯ ಬೇಕಾಗಬಹುದು. ದಿನದಲ್ಲಿ ಗರಿಷ್ಠ 300 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಬಹುದು. ಐಸಿಎಂಆರ್ ಮಾರ್ಗಸೂಚಿಗಳ ಪ್ರಕಾರ ಮಾದರಿಗಳನ್ನು ಸಂಗ್ರಹಿಸುವ ವಿವರಗಳು ಮತ್ತು ವರದಿಗಳನ್ನು ಆನ್ಲೈನ್ನಲ್ಲಿ ಲಭ್ಯವಾಗುವಂತೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಇನ್ನು ಲ್ಯಾಬ್ನ ಸೂಕ್ಷ್ಮ ಜೀವಶಾಸ್ತ್ರಜ್ಞ ಡಾ. ಅನೀತ್ ಡಿ ಸೋಜಾ ಅವರು ಮಾತನಾಡಿ, ಪಿಪಿಇ ಕಿಟ್ಗಳನ್ನು ಧರಿಸಿ ಸಿಬ್ಬಂದಿಗಳು ಪರೀಕ್ಷೆಗಳನ್ನು ನಡೆಸುತ್ತಾರೆ. ಮಾದರಿಗಳನ್ನು ಆರಂಭದಲ್ಲಿ ಸಂಸ್ಕರಣಾ ಕೊಠಡಿಯಲ್ಲಿ ಸಂಗ್ರಹಿಸಿ, ಸುರಕ್ಷತಾ ಕ್ಯಾಬಿನೆಟ್ನಲ್ಲಿ ಇರಿಸಲಾಗುತ್ತದೆ, ಬಳಿಕ ಸುರಕ್ಷಿತವಾಗಿ ಪರೀಕ್ಷೆ ನಡೆಸಲು ಆರ್ಟಿಪಿಸಿಆರ್ ಯಂತ್ರಗಳನ್ನು ಅಳವಡಿಸಲಾಗಿರುವ ಕೋಣೆಗೆ ತಲುಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.