ಕಾಸರಗೋಡು, ಜು. 07 (DaijiworldNews/MB) : ಕೊರೊನಾ ಸೋಂಕು ಸಮುದಾಯ ಹರಡುವ ಸಾಧ್ಯತೆ ಮನಗಂಡು ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ನಿಯಂತ್ರಣಗಳನ್ನು ಜಾರಿಗೆ ತರಲಾಗಿದ್ದು, ಸಾರ್ವಜನಿಕರು ಈ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು. ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ . ಶಿಲ್ಪಾ ಮುನ್ನೆಚ್ಚರಿಕೆ ನೀಡಿದ್ದಾರೆ.

ಅಂಗಡಿ ಮುಂಗಟ್ಟುಗಳಲ್ಲಿ ಒಂದೇ ಸಮಯ ಐದಕ್ಕಿಂತ ಅಧಿಕ ಮಂದಿ ನಿಲ್ಲುವಂತಿಲ್ಲ. ಸಾಮಾಜಿಕ ಅಂತರ ಪಾಲಿಸಿ ಸಾಮಾಗ್ರಿ ಖರೀದಿಸಬೇಕು. ಆರೋಗ್ಯ ಇಲಾಖೆಯ ಮಾರ್ಗಸೂಚಿ ಪಾಲಿಸಬೇಕು. ಸಾರ್ವಜನಿಕ ಸ್ಥಳ ಹಾಗೂ ಉದ್ಯೋಗದ ಸ್ಥಳಗಳಲ್ಲಿ ಮಾಸ್ಕ್ ಧರಿಸಬೇಕು. ವಿವಾಹ ಸಮಾರಂಭಗಳಲ್ಲಿ 50 ಕ್ಕಿಂತ ಅಧಿಕ ಮಂದಿ ಪಾಲ್ಗೊಳ್ಳುವಂತಿಲ್ಲ. ನಿಬಂಧನೆ ಪಾಲನೆ ಕಡ್ಡಾಯವಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವಂತಿಲ್ಲ. ಮೆರೆವಣಿಗೆ, ಮುಷ್ಕರಕ್ಕೆ ಪೂರ್ವಾನುಮತಿ ಅಗತ್ಯ. ಎಲ್ಲಾ ರೀತಿಯ ಕ್ರೀಡೆಗಳನ್ನು ನಿಷೇಧಿಸಲಾಗಿದೆ. ಆದೇಶ ಉಲ್ಲಂಘಿಸುವವರ ವಿರುದ್ಧ ಹತ್ತು ಸಾವಿರ ರೂ. ದಂಡ ಹಾಗೂ ಎರಡು ವರ್ಷ ಸಜೆ ವಿಧಿಸಲಾಗುವುದು.
ಕಂಟೈನ್ಮೆಂಟ್ ಝೋನ್ಗಳಲ್ಲಿ ಸಾರ್ವಜನಿಕ ಸಮಾರಂಭಗಳನ್ನು ನಡೆಸಕೂಡದು. ಜನರು ಬೇರೆ ಕಡೆ ತೆರಳುವಂತಿಲ್ಲ. ಹೊರಗಡೆಯಿಂದ ಜನರು ಬಂದು ವಾಸ್ತವ್ಯ ಹೂಡುವಂತಿಲ್ಲ. ಗುಂಪು ಸೇರುವುದುನ್ನು ನಿಷೇಧಿಸಲಾಗಿದೆ. ಕ್ವಾರಂಟೈನ್ನಲ್ಲಿರುವವರು ಹೊರಗಡೆ ಬಂದು ಸಾರ್ವಜನಿಕ ಸ್ಥಳಗಳಿಗೆ ತೆರಳುತ್ತಿರುವ ಮಾಹಿತಿ ಲಭಿಸಿದ್ದು, ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು.
ಹೊರ ರಾಜ್ಯಗಳಿಂದ ಸರಕು ಹೇರಿಕೊಂಡು ಬರುವ ಹಾಗೂ ಇತರ ವಾಹನ ಗಳನ್ನು ರಸ್ತೆ ಬದಿ ನಿಲ್ಲಿಸಬಾರದು. ಹೋಟೆಲ್ ಗಳಲ್ಲಿ ಆಹಾರ ವಸ್ತುವನ್ನು ಪಾರ್ಸೆಲ್ ಆಗಿ ಮಾತ್ರ ನೀಡಬೇಕು. ಆರಾಧಾನಾಲಯ ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಹೊರ ರಾಜ್ಯಗಳಿಂದ ವಲಸೆ ಕಾರ್ಮಿಕರು ಜಿಲ್ಲೆಗೆ ಆಗಮಿಸಿದರೆ ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರೆಂಟೈನ್ನಲ್ಲಿರಬೇಕು. ಅದಕ್ಕಿರುವ ಸೌಲಭ್ಯ ಗುತ್ತಿಗೆದಾರರು ಒದಗಿಸಬೇಕು.
ದೂರು ಸಲ್ಲಿಕೆಗೆ ಆನ್ಲೈನ್ ಸೌಲಭ್ಯ
ಸಾರ್ವಜನಿಕರು ಈ-ಮೇಲ್ ಸಹಿತ ಆನ್ಲೈನ್ ಮೂಲಕ ಪೊಲೀಸರಿಗೆ ದೂರು ಸಲ್ಲಿಸಬಹುದು. ಬೇಕಲ, ರಾಣಿಪುರ, ಪೊಸಡಿಗುಂಪೆ ಸಹಿತ ಪ್ರವಾಸಿ ತಾಣಗಳನ್ನು ಜು.31 ವರೆಗೆ ತೆರೆಯಲು ಅನುಮತಿಯಿಲ್ಲ ಎಂದು ಪೊಲೀಸರು ಆದೇಶಿಸಿದ್ದಾರೆ.