ಉಳ್ಳಾಲ, ಜು. 07 (DaijiworldNews/MB) : ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ನಾಲ್ಕು ಪ್ರಕರಣ ಸೇರಿ, ಕೋಟೆಕಾರು, ಬೆಳ್ಮ, ದೇರಳಕಟ್ಟೆ ಬಾಳೆಪುಣಿ ಗ್ರಾಮಗಳಲ್ಲಿ ಒಟ್ಟು 19 ಜನರಿಗೆ ಸೋಂಕು ದೃಡವಾಗಿದ್ದು, ಇವರಲ್ಲಿ ಖಾಸಗಿ ಆಸ್ಪತ್ರೆಯ ಸಿಬಂದಿಗಳಲ್ಲಿ 6 ಮಂದಿಯಲ್ಲಿ ಸೋಂಕು ಸೇರಿದಂತೆ ದೇರಳಕಟ್ಟೆಯ ಹೋಟೆಲ್ ಉದ್ಯಮಿಗೆ ಸೋಂಕು ದೃಢವಾಗಿದೆ.

ಉಳ್ಳಾಲ ನಗರಸಭಾ ವ್ಯಾಪ್ತಿಯ ಉಳ್ಳಾಲ ಜಂಕ್ಷನ್ನಲ್ಲಿ ಖಾಸಗಿ ಕಂಪೌಂಡ್ನ ಮೂವರು ನಿವಾಸಿಗಳಲ್ಲಿ ಸೋಂಕು ಕಂಡು ಬಂದಿದ್ದು, ಈ ಹಿಂದೆ ಸೋಂಕಿತರೊಬ್ಬರ ಪ್ರಾಥಮಿಕ ಸಂಪರ್ಕದಿಂದ ಸೋಂಕು ಹರಡಿದೆ. ಉಳ್ಳಾಲ ಸಿಎಂಸಿ 46ರ ವ್ಯಕ್ತಿಯಲ್ಲಿ ಸೋಂಕು ಪಾಸಿಟಿವ್ ಆಗಿದೆ.
ಖಾಸಗಿ ಆಸ್ಪತ್ರೆ ಸಿಬಂದಿಗಳಲ್ಲಿ ಸೋಂಕು : ಇಲ್ಲಿನ ಖಾಸಗಿ ಆಸ್ಪತ್ರೆಯ ಸಿಬಂದಿಗಳಲ್ಲಿ ಸೋಂಕು ಕಂಡು ಬಂದಿದ್ದು ಇಬ್ಬರು ವೈದ್ಯ ವಿದ್ಯಾರ್ಥಿಗಳು ಸೇರಿ ಒಟ್ಟು 6 ಮಂದಿಯಲ್ಲಿ ಸೋಂಕು ದೃಡವಾಗಿದೆ. ಈ ಹಿಂದೆಯೂ ಸಿಬಂದಿಗಳಿಗೆ ಸೋಂಕು ದೃಡವಾಗಿದ್ದು, ಕೆಲವರಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ಬಂದಿದ್ದರೆ ಇನ್ನು ಕೆಲವರಿಗೆ ಸೋಂಕಿನ ಮೂಲ ತಿಳಿದು ಬಂದಿಲ್ಲ.
ಕೋಟೆಕಾರು ಗ್ರಾಮದ ನಿವಾಸಿ ದೇರಳಕಟ್ಟೆಯ ಹೋಟೆಲ್ ಉದ್ಯಮಿಗೂ ಸೋಂಕು ತಗುಲಿದ್ದು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳ್ಮ ನಿತ್ಯಾನಂದ ನಗರದ 24 ವರ್ಷದ ಯುವತಿಗೆ, ಕೋಟೆಕಾರು ಸೋಮೇಶ್ವರ 25 ವರ್ಷದ ಯುವಕನಿಗೆ, ಕೋಟೆಕಾರು ಗ್ರಾಮದ 37 ವರ್ಷದ ವ್ಯಕ್ತಿಗೆ ದೇರಳಕಟ್ಟೆ ಕುತ್ತಾರು ಪದವಿನ 24 ವರ್ಷದ ಯುವಕನಿಗೆ, ದೇರಳಕಟ್ಟೆಯ 34 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು ಚಿಕ್ಕಮಗಳೂರಿನಿಂದ ಚಿಕಿತ್ಸೆಗೆ ಆಗಮಿಸಿದ್ದ 33 ವರ್ಷದ ಮಹಿಳೆಯಲ್ಲಿ ಸೋಂಕು ಕಂಡು ಬಂದಿದೆ. ಬಂಟ್ವಾಳ ತಾಲೂಕಿನ ಬಾಳೆಪುಣಿ ಹೂಹಾಕುವ ಕಲ್ಲಿನ 15 ವರ್ಷದ ಬಾಲಕಿ ಮತ್ತು 50 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ.