ಸುರತ್ಕಲ್, ಜು 08 (DaijiworldNews/PY): ಕೂಳೂರಿನಿಂದ ಜೋಕಟ್ಟೆ ತೋಕೂರು ಸಮೀಪ ಎಂಎಸ್ಇಝಡ್ ಸಂಪರ್ಕಿಸುವ ಮೇಲ್ಸೇತುವೆಯ ರೈಲ್ವೇ ಹಳಿಯ ಮೇಲ್ಭಾಗ ಭಾರೀ ಗಾತ್ರದ ಉಕ್ಕಿನ ಗಿರ್ಡರ್ಗಳನ್ನು ಅಳವಡಿಸುವ ಕಾರ್ಯ ಮಂಗಳವಾರ ನಡೆಯಿತು.




ಕೊಂಕಣ ರೈಲ್ವೆ ಮಾರ್ಗದಾದ್ಯಂತದ ಜೋಕ್ಕಟ್ಟೆ ಗ್ರಾಮದಲ್ಲಿ ಎಂಎಸ್ಇಝಡ್ ಫ್ಲೈ ಓವರ್ ನಿರ್ಮಾಣ ಕಾರ್ಯವನ್ನು ಕೊಂಕಣ ರೈಲ್ವೆ ಕೈಗೆತ್ತಿಕೊಂಡಿದ್ದು, 45 ಮೀಟರ್ ಉದ್ದದ 4 ಸ್ಟೀಲ್ ಗಿರ್ಡರ್ಗಳನ್ನು ಯಶಸ್ವಿಯಾಗಿ ಜೋಡಣೆ ಮಾಡಲಾಯಿತು. 500 ಮೆ. ಟನ್ ಹಾಗೂ 250 ಮೆ.ಟನ್ ಸಾಮರ್ಥ್ಯದ ಎರಡು ಕ್ರೇನ್ಗಳನ್ನು ಗಿರ್ಡರ್ಗಳನ್ನು ಜೋಡಿಸಲು ಉಪಯೋಗಿಸಲಾಯಿತು. ಕಾಮಗಾರಿ ನಡೆಯುತ್ತಿದ್ದ ಸಂದರ್ಭ ಕೆಲಕಾಲ ವಾಹನ ಓಡಾಟವನ್ನು ನಿರ್ಬಂಧಿಸಲಾಗಿತ್ತು.
ಈ ಯೋಜನೆಯ ಕಾಮಗಾರಿಯು 2017ರಲ್ಲಿ ಆರಂಭವಾಗಿದ್ದು, ರೈಲ್ವೆಯ ಉನ್ನತ ವಿಭಾಗದಿಂದ ಅನುಮತಿ ವಿಳಂಬವಾದ ಹಿನ್ನೆಲೆ ಒಂದು ಭಾಗದ ಕೆಲಸ ಮಾತ್ರವೇ ಬಾಕಿಯಾಗಿತ್ತು.
ಈ ಯೋಜನೆಯಿಂದ ಯಾವುದೇ ಅಡೆತಡೆಗಳಿಲ್ಲದೆ ವಿಶೇಷ ಆರ್ಥಿಕ ವಲಯಕ್ಕೆ ವಾಹನ ಓಡಾಟ ಸಾಧ್ಯವಾಗಲಿದ್ದು, ಕುಳಾಯಿ, ಸುರತ್ಕಲ್ ಸೇರಿದಂತೆ ರಾಜ್ಯ ಹೆದ್ದಾರಿ, ಪಾಲಿಕೆ ರಸ್ತೆಗಳಲ್ಲಿ ಲಾರಿಗಳ ಓಡಾಟವು ಈ ಯೋಜನೆಯಿಂದ ಕಡಿಮೆಯಾಗಲಿದೆ.