ಮಂಗಳೂರು, ಜು. 08 (DaijiworldNews/MB) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು ಬುಧವಾರ ಒಂದು ದಿನದಲ್ಲೇ 183 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಈವರೆಗೆ ದೃಢಪಟ್ಟ ಕೊರೊನಾ ಸೋಂಕು ಪ್ರಕರಣಗಳಲ್ಲಿ ಈ ದಿನ ಹೆಚ್ಚಿನ ಪ್ರಕರಣಗಳು ದಾಖಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1,542 ಕ್ಕೆ ಏರಿಕೆಯಾಗಿದೆ.

63 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ, ಇಬ್ಬರಿಗೆ ದ್ವಿತೀಯ ಸಂಪರ್ಕದಿಂದ ಕೊರೊನಾ ಸೋಂಕು ತಗುಲಿದ್ದರೆ 25 ಐಎಲ್ಐ ಹಾಗೂ 4 ಎಸ್ಎಆರ್ಐ ಪ್ರಕರಣಗಳಾಗಿವೆ. ಇಬ್ಬರು ಮಹಾರಾಷ್ಟ್ರದಿಂದ ಹಾಗೂ ಒಬ್ಬರು ಬೆಂಗಳೂರಿನಿಂದ ಬಂದವರಾಗಿದ್ದಾರೆ. ಹಾಗೆಯೇ ಐವರು ಸೌದಿ, ಮಸ್ಕತ್, ದುಬೈನಿಂದ ಬಂದವರಾಗಿದ್ದಾರೆ. 22 ಮಂದಿಗೆ ರ್ಯಾಂಡಮ್ ಪರೀಕ್ಷೆಯಿಂದ ಕೊರೊನಾ ದೃಢಪಟ್ಟಿದೆ. ಇನ್ನು 54 ಮಂದಿಯ ಕೊರೊನಾ ಸೋಂಕಿನ ಮೂಲವನ್ನು ಪತ್ತೆಹಚ್ಚಲಾಗುತ್ತಿದೆ.
ಜಿಲ್ಲೆಯಲ್ಲಿ ಈವರೆಗೆ 22,181 ಮಂದಿಯ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆ ಮಾಡಲಾಗಿದ್ದು ಈ ಪೈಕಿ 21,695 ವರದಿಗಳು ಲಭಿಸಿದೆ. ಈ ಪೈಕಿ 20,153 ಕೊರೊನಾ ವರದಿ ನೆಗೆಟಿವ್ ಆಗಿದ್ದರೆ 1,542 ಕೊರೊನಾ ವರದಿ ಪಾಸಿಟಿವ್ ಆಗಿದೆ.
ಇನ್ನು ಜಿಲ್ಲೆಯಲ್ಲಿ ಇಂದು 12 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಈವರೆಗೆ 695 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 819 ಪ್ರಕರಣಗಳು ಸಕ್ರಿಯವಾಗಿದೆ. ಮೂವರು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.