ಕುಡುಪು, ಜು. 08 (DaijiworldNews/MB) : ಜುಲೈ 25 ರ ನಾಗರಪಂಚಮಿಯಂದು ಕೊರೊನಾ ಕಾರಣದಿಂದ ಕುಡುಪು ದೇವಸ್ಥಾನದಲ್ಲಿ ಯಾವುದೇ ಸೇವೆಗಳು ಇರುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ದೇವಸ್ಥಾನ ಹೊರಡಿಸಿರುವ ಪ್ರಕಟಣೆಯೆಂದು ಒಂದು ಸಂದೇಶ ಹರಿದಾಡುತ್ತಿದ್ದು ಈ ಬಗ್ಗೆ ಸ್ಪಷ್ಟನೆ ನೀಡಿರುವ ಮುಜರಾಯಿ ಅಧಿಕಾರಿಗಳು ಇಂತಹ ಯಾವುದೇ ಪ್ರಕಟಣೆ ದೇವಸ್ಥಾನದಿಂದ ನೀಡಿರುವುದಿಲ್ಲ ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ, ''ಕುಡುಪು ಕ್ಷೇತ್ರದಲ್ಲಿ ಪ್ರತಿ ವರ್ಷ ಆಚರಿಸುವ ನಾಗರ ಪಂಚಮಿ ದಿನದಂದು ಅಧಿಕ ಭಕ್ತರು ಸೇರುವ ಕಾರಣದಿಂದ ಕೊರೊನಾ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಿದೆ. ಹಾಗಾಗಿ ನಾಗರ ಪಂಚಮಿಯಂದು ಭಕ್ತಾಧಿಗಳಿಗೆ ಕ್ಷೇತ್ರಕ್ಕೆ ಭೇಟಿಗೆ ನಿರ್ಭಂಧಿಸಲಾಗಿದೆ. ಹಾಗೆಯೇ ದೇವಾಲಯದಲ್ಲಿ ಯಾವುದೇ ಸೇವೆಗಳು, ಸೇವಾ ಪ್ರಸಾದ ವಿತರಣೆ, ತೀರ್ಥ ಪ್ರಸಾದ ಹಾಗೂ ಅನ್ನ ಸಂತರ್ಪಣೆಗಳು ಇರುವುದಿಲ್ಲ. ಮುಂದಿನ ದಿನಗಳಲ್ಲಿ ಅನುಕೂಲಕರ ಪರಿಸ್ಥಿತಿ ಉಂಟಾದಾಗ ಭಕ್ತಾಧಿಗಳಿಗೆ ಸೇವೆಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗುವುದು'' ಎಂಬ ದೇವಾಸ್ಥಾನದಿಂದ ನೀಡಲಾದ ಪ್ರಕಟಣೆ ಎಂಬ ಪೋಟೋವೊಂದು ಹರಿದಾಡುತ್ತಿದೆ.
ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಮುಜರಾಯಿ ಅಧಿಕಾರಿಗಳು, ''ಕುಡುಪು ದೇವಸ್ಥಾನದ ಬಗ್ಗೆ ಪ್ರಕಟಣೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇಂತಹ ಯಾವುದೇ ಪ್ರಕಟಣೆ ದೇವಸ್ಥಾನದಿಂದ ನೀಡಿರುವುದಿಲ್ಲ'' ಎಂದು ತಿಳಿಸಿದ್ದಾರೆ.