ಮಂಗಳೂರು, ಜು 09 (Daijiworld News/MSP): ಜಿಲ್ಲೆಯಲ್ಲಿ ಏರುಗತಿಯಲ್ಲಿ ಹರಡುತ್ತಿರುವ ಕೊರೊನಾ ಸಾಂಕ್ರಮಿಕ ರೋಗದಿಂದ ಹೆಚ್ಚಿನ ಕಡೆ ಸ್ವಯಂಪ್ರೇರಿತ ಲಾಕ್ ಡೌನ್ ಪ್ರಾರಂಭವಾಗಿದ್ದು ಈ ನಡುವೆ ಇದಕ್ಕೆ ಬೆಂಬಲ ಸೂಚಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಪ್ರಾರಂಭವಾಗಿದೆ.

"ಐ ಸಪೋರ್ಟ್ ಕೋಸ್ಟಲ್ ಕರ್ಪ್ಯೂ" ಹ್ಯಾಷ್ ಟ್ಯಾಗ್ ಎಂಬ ಅಭಿಯಾನ ಟ್ವಿಟರ್ ನಲ್ಲಿ ಆರಂಭವಾಗಿದೆ. ಅನೇಕ ಮಂದಿ ಇದನ್ನು ಬೆಂಬಲಿಸಿ ಮರು ಟ್ವೀಟ್ ಮಾಡಿದ್ದಾರೆ.
ಇನ್ನೊಂದೆಡೆ ರಾಜ್ಯ ಸರ್ಕಾರದ ಪರಿಷ್ಕೃತ ಆದೇಶದಂತೆ ರಾಜ್ಯದೆಲ್ಲೆಡೆ ರಾತ್ರಿ 8 ರಿಂದ ಬೆಳಗ್ಗೆ 5 ರವರೆಗೆ ಕರ್ಪ್ಯೂ ವಿಧಿಸಲಾಗಿದ್ದು, ನಗರದ ಬಹುತೇಕ ಕಡೆಗಳಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಬಜಪೆ ಗ್ರಾಂ.ಪ ವ್ಯಾಪ್ತಿಯಲ್ಲಿ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ವರ್ತಕರು, ಉದ್ಯಮಿಗಳು ಜು. 8 ರಿಂದ 22ರವರೆಗೆ ಮಧ್ಯಾಹ್ನ 2 ಗಂಟೆಯಿಂದ ಬಂದ್ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಇನ್ನು ಉಳ್ಳಾಲ ವ್ಯಾಪ್ತಿಯಲ್ಲೂ ಸ್ವಯಂಪ್ರೇರಿತ ಲಾಕ್ ಡೌನ್ ಮುಂದುವರಿದೆ. ಮೂಲ್ಕಿ ಸ್ವಯಂಪ್ರೇರಿತ ಲಾಕ್ ಡೌನ್ ಯಶಸ್ವಿಗೆ ವರ್ತಕರ ಜತೆಗೆ ಗ್ರಾಹಕರೂ ಕೈಜೋಡಿಸಿದ್ದಾರೆ. ಇನ್ನು ಕಿನ್ನಿಗೋಳಿಯಲ್ಲೂ ಸಮಾನ ಮನಸ್ಕರ ಸಭೆಯಲ್ಲಿ ಜು.11ರವರೆಗೆ ಅಪರಾಹ್ನ2 ಗಂಟೆಯಿಂದ ಮರುದಿನ 6 ತನಕ ನಿರ್ಣಯದಂತೆ ಬುಧವಾರದಿಂದಲೇ ಅಂಗಡಿ ಮುಂಗಟ್ಟು ಮುಚ್ಚಲಾಗಿದೆ. ಇದಲ್ಲದೆ ಮೂಡುಬಿದಿರೆ ಉರ್ವ ಮಾರುಕಟ್ಟೆ ಪಕ್ಷಿಕೆರೆಯಲ್ಲಿಯೂ ಸ್ವಯಂಪ್ರೇರಿತ ಬಂದ್ ಮಾಡಲಾಗಿದೆ.