ಮಂಗಳೂರು, ಜು. 09 (DaijiworldNews/MB) : ಮಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಮಂಗಳೂರು, ಪುತ್ತೂರು ಮೊದಲಾದ ಕಡೆ ಪ್ರತಿನಿತ್ಯ ಉದ್ಯೋಗ ನಿಮಿತ್ತ ಹೋಗಿ ಬರುತ್ತಿದ್ದವರಯ ಇನ್ನು ಒಮ್ಮೆ ಕರ್ನಾಟಕಕ್ಕೆ ಹೋದರೆ 28 ದಿನ ಅಲ್ಲೇ ಇರಬೇಕು ಎಂಬ ಕೇರಳ ಸರ್ಕಾರದ ನಿಯಮದಿಂದ ಎರಡು ಜಿಲ್ಲೆಗಳನ್ನು ಉದ್ಯೋಗಕ್ಕಾಗಿ ಆಶ್ರಯಿಸಿದವರು ಪರದಾಡುವಂತಾಗಿದೆ.

ಮಂಗಳೂರಿಗೆ ಹೋಗಿ ಬರುತ್ತಿದ್ದ ಐವರಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಕೇರಳ ಸರ್ಕಾರ ಈ ಕಠಿಣ ಕ್ರಮ ಕೈಗೊಂಡಿದ್ದು ಸೋಮವಾರ ಏಕಾಏಕಿ ಕಾಸರಗೋಡು ಜಿಲ್ಲಾಡಳಿತ ಈ ಕೈಗೊಂಡ ಈ ಕ್ರಮದಿಂದ ಕಾಸರಗೋಡಿನಿಂದ ಮಂಗಳೂರಿಗೆ ಬರುವವರು ಮಾತ್ರವಲ್ಲದೆ ಮಂಗಳೂರಿನಿಂದ ಕಾಸರಗೋಡಿಗೆ ಹೋಗುವವರಿಗೂ ಸಂಕಷ್ಟ ಎದುರಾಗಿದೆ.
ಲಾಕ್ಡೌನ್ ಸಂದರ್ಭದಲ್ಲಿ ಕರ್ನಾಟಕವು ಎಲ್ಲಾ ಗಡಿಗಳನ್ನು ಬಂದ್ ಮಾಡಲು ಮುಂದಾದ ಕಾರಣ ಕಾಸರಗೋಡು ಗಡಿಗಳು ಬಂದ್ ಆಗಿದ್ದವು. ನಂತರ ಎರಡೂ ಜಿಲ್ಲೆಯಲ್ಲಿ ಪಾಸ್ ಜಾರಿ ಮಾಡಲಾಗಿದೆ. ಇದಾದ ಕೆಲವೇ ದಿನಗಳಲ್ಲಿ ಈಗ ಕೇರಳವು ಗಡಿ ಬಂದ್ ಮಾಡಿರುವುದು ಎರಡು ರಾಜ್ಯದ ಜನರನ್ನು ಗೊಂದಲಕ್ಕೆ ದೂಡಿದೆ.
ಉದ್ಯೋಗಿಗಳಿಗೆ ಗಡಿ ದಾಟಿ ಬರಲು ಹಾಗೂ ಹೋಗಲು ಸಾಧ್ಯವಾಗದೆ ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿಯೂ ಇದ್ದಾರೆ.
ಲಾಕ್ಡೌನ್ ಸಡಿಲಿಕೆಯಾದ ಕಾರಣದಿಂದ ಎರಡೂ ಜಿಲ್ಲೆಗಳಲ್ಲಿ ಕನಿಷ್ಟ ಎರಡು ಸಿಬ್ಬಂದಿಗಳ ಮೂಲಕ ಸಂಸ್ಥೆಗಳು ಕಾಯಾರಂಭ ಮಾಡಿದೆ. ಆದರೆ ಈಗ ಏಕಾಏಕಿಯಾಗಿ ಕೈಗೊಂಡ ಈ ತೀರ್ಮಾನದಿಂದ ಉಭಯ ಜಿಲ್ಲೆಗಳ ಉದ್ಯೋಗಿಗಳು ಅತ್ತ ಹೋಗಲಾಗದೆ ಇತ್ತ ಬರಲಾಗದೆ ಪರದಾಡುವಂತಾಗಿದೆ. ಅಷ್ಟು ಮಾತ್ರವಲ್ಲದೆ ಕಾಸರಗೋಡಿನಿಂದ ಮಂಗಳೂರು ಭಾಗಕ್ಕೆ ಚಿಕಿತ್ಸೆಗಾಗಿ ಬರುತ್ತಿದ್ದವರು ಕೂಡಾ ತೊಂದರೆಗೆ ಒಳಗಾಗಿದ್ದಾರೆ.
ಡೈಲಿ ಪಾಸ್ ಮೂಲಕ ನಿತ್ಯವೂ ಕೆಲಸಕ್ಕೆ ಬರುತ್ತಿದ್ದವರನ್ನು ಸೋಮವಾರ ಕೇರಳ ಪೊಲೀಸರು ತಲಪಾಡಿಯಲ್ಲಿ ತಡೆಹಿಡಿದಿರುವುದರಿಂದ ಸ್ಥಳದಲ್ಲಿ ಜಮಾಯಿಸಿದ ಸುಮಾರು 100 ಕ್ಕೂ ಅಧಿಕ ಮಂದಿ ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿದು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಇನ್ನು ಕೇರಳ ಸರ್ಕಾರವೂ ವೈದ್ಯರ ಸಹಿತ ಆರೋಗ್ಯ ಕಾರ್ಯಕರ್ತರಿಗೂ ಅನ್ವಯವಾಗುವಂತೆ ಆದೇಶ ಹೊರಡಿಸಿದ್ದು ಅನಾವಶ್ಯಕ ಪ್ರಯಾಣ ತಡೆಯುವ ನಿಟ್ಟಿನಲ್ಲಿ ಗಡಿ ರಸ್ತೆಯಲ್ಲಿ ಬ್ಯಾರಿಕೆಡ್ ಇರಿಸಿ ನಿರ್ಬಂಧ ಹೇರಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕೇರಳ ಸರ್ಕಾರ ದ.ಕ.ಜಿಲ್ಲೆಗೆ ಉದ್ಯೋಗಕ್ಕಾಗಿ ಬರುವವರಿಗೆ ಯಾಕಾಗಿ ನಿರ್ಬಂಧ ಹೇರಿದೆ ಎಂದು ತಿಳಿಯುತ್ತಿಲ್ಲ. ಈ ನಿಟ್ಟಿನಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿಯವರನ್ನು ಭೇಟಿಯಾಗಿ ಈ ಬಗ್ಗೆ ಮಾತನಾಡಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ನ್ಯಾಯವಾದಿ, ಕೇರಳ ತುಳು ಅಕಾಡೆಮಿ ಮಾಜಿ ಅಧ್ಯಕ್ಷ ಸುಬ್ಬಯ್ಯ ರೈ ಅವರು, ತುಳು ನಾಡಿನ ಭಾಗವಾಗಿರುವ ಕಾಸರಗೋಡು ಜಿಲ್ಲೆಯ ಜನರು ಎರಡು ಜಿಲ್ಲೆಯಲ್ಲಿ ಬೆಸೆದುಕೊಂಡಿದ್ದಾರೆ. ಕಾಸರಗೋಡು ಜಿಲ್ಲೆಯವರು ಉದ್ಯೋಗ, ಚಿಕಿತ್ಸೆ, ಶಿಕ್ಷಣಕ್ಕಾಗಿ ಮಂಗಳೂರಿಗೆ ತೆರಳುತ್ತಾರೆ. ನಮಗೆ ಎರಡು ರಾಜ್ಯಗಳ ಗಡಿ ಎಂಬುವುದೇ ತಿಳಿದಿಲ್ಲ. ಜನರಿಗೂ ಆ ರೀತಿಯಾದ ಭಾವನೆ ಇಲ್ಲ. ಆದರೆ ಈಗ ಕೇರಳ ಸರ್ಕಾರ ಈ ರೀತಿಯಾಗಿ ಏಕಾಏಕಿ ನಿಯಮವನ್ನು ತಂದು ಜನರ ಜೀವನಕ್ಕೆ ಸಂಕಷ್ಟವನ್ನು ತಂದೊಡ್ಡಿದ್ದಾರೆ. ಇದರ ವಿರುದ್ಧವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಾಗುವುದು ಎಂದು ಹೇಳಿದ್ದಾರೆ.