ಬೆಳ್ತಂಗಡಿ, ಜು 09 (Daijiworld News/MSP): ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಮರವೊಂದು ಉರುಳಿ ಸಂಚಾರ ಅಸ್ತವ್ಯಸ್ಥವಾದ ಘಟನೆ ಗುರುವಾರ ಮುಂಜಾನೆ ಮುಂಡಾಜೆ ಗ್ರಾ.ಪಂ.ವ್ಯಾಪ್ತಿಯಲ್ಲಿ ನಡೆದಿದೆ. ಇದರಿಂದ ಶಾಸಕರೊಬ್ಬರಿಗೂ ತೊಂದರೆಯಾಯಿತು.

ಗ್ರಾಮದ ಅಂಬಡ್ತ್ಯಾರ್ ಎಂಬಲ್ಲಿ ಬೆಳಿಗ್ಗೆ 6.45 ರ ಸುಮಾರಿಗೆ ಬೃಹತ್ ಗಾತ್ರದ ಮರ ರಸ್ತೆಗೆ ಅಡ್ಡಲಾಗಿ ಬಿದ್ದು ವಾಹನ ಸಂಚಾರಕ್ಕೆ ಸುಮಾರು ಎರಡು ತಾಸು ಅಡ್ಡಿಯಾಯಿತು. ಮಂಗಳೂರು ಮೂಲಕ ಚಾರ್ಮಾಡಿ,ಮೂಡಿಗೆರೆ, ಬೆಂಗಳೂರಿಗೆ ಹೋಗುವ ವಾಹನ ಪ್ರಯಾಣಿಕರು ಕೆಲವು ಕಾಲ ಪರದಾಡುವಂತಾಯಿತು.
ಸ್ಥಳೀಯ ಲಘುವಾಹನಗಳು ಗುಂಡಿ ಎಂಬ ಊರಿನ ಮೂಲಕ ಹೋಗುವ ಬದಲಿ ರಸ್ತೆಯಲ್ಲಿ ಸಂಚರಿಸಿದ ಕಾರಣ ಭಾರೀ ವಾಹನಗಳ ಸಾಲು ಕಂಡು ಬರಲಿಲ್ಲಾ. ಆದರೆ ಹೆಚ್ಚಿನ ಘನ ವಾಹನಗಳು ಹಾಗೂ ಬದಲಿ ರಸ್ತೆ ಬಗ್ಗೆ ಮಾಹಿತಿ ಇಲ್ಲದ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಯಿತು.
ಮರ ಬಿದ್ದು ವಿದ್ಯುತ್ ತಂತಿಗಳಿಗೂ ಹಾನಿಯಾಗಿದ್ದು ಮುಂಡಾಜೆ ಪರಿಸರದಲ್ಲಿ ಹಲವು ತಾಸು ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತು.
ಈ ರಸ್ತೆ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ಕಾರ್ಕಳ ಶಾಸಕ ಸುನೀಲ್ ಕುಮಾರ್ ಹಲವು ಸಮಯ ಕಾಯಬೇಕಾಯಿತು. ಬಳಿಕ ಸ್ಥಳೀಯ ಜಗದೀಶ್ ನಾಯ್ಕ್ ಎಂಬುವರು ಶಾಸಕರನ್ನು ಬದಲಿ ಗುಂಡಿ ರಸ್ತೆ ಮೂಲಕ ಕಳುಹಿಸಿ ಕೊಟ್ಟು ಸಹಕರಿಸಿದರು.
ಉಪವಲಯ ಅರಣ್ಯಾಧಿಕಾರಿ ಉಲ್ಲಾಸ್,ಸಿಬ್ಬಂದಿ ಶರತ್,ಸದಾನಂದ, ಗ್ರಾಮ ಪಂಚಾಯತ್ ಸಿಬ್ಬಂದಿ ಜನಾರ್ದನ್,ಮುಂಡಾಜೆ ಮೆಸ್ಕಾಂನ ಶಂಕರ ಗೌಡ ಬಿರಾದರ್,ಗೌರೀಶ್ ಸ್ಥಳೀಯರಾದ ಸಂತೋಷ ಕಲ್ಲಾರ್ಯ,ಜಗದೀಶ ಕೊಂಬಿನಡ್ಕ,ಪ್ರವೀಣ,ಅಚ್ಯುತ ಮೊದಲಾದವರು ಮರ ತೆರವುಗೊಳಿಸಲು ಸಹಕರಿಸಿ,ಸುಗಮ ವಾಹನ ಸಂಚಾರಕ್ಕೆ ಅನುಕೂಲಮಾಡಿ ಕೊಟ್ಟರು.