ಸುಳ್ಯ, ಏ 11 : ಮುಂದಿನ ವಿಧಾನಸಭಾ ಚುನಾವಣೆಗೆ ಸುಳ್ಯ ಕ್ಷೇತ್ರದಿಂದ ಮುಖಂಡರ ಮತ್ತು ಕಾರ್ಯಕರ್ತರ ತೀರ್ಮಾನದಂತೆ ಎಸ್ ಅಂಗಾರ ಅವರ ಹೆಸರನ್ನು ಸರ್ವಸಮ್ಮತ ಒಮ್ಮತದಿಂದ ಕಳುಹಿಸಿದ್ದೆವು. ಅವರ ಹೆಸರು ಅಂತಿಮ ಗೊಂಡಿದೆ. ಈ ಬಾರಿಯ ಚುನಾವಣೆಯಲ್ಲಿ ಎಸ್. ಅಂಗಾರವರು ಸುಮಾರು 25 ಸಾವಿರ ಮತಗಳ ಅಂತರದಿಂದ ಗೆಲ್ಲಲಿದ್ದಾರೆ. ಅಲ್ಲದೇ ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು ಶಾಸಕ ಅಂಗಾರರಿಗೆ ಮಂತ್ರಿ ಸ್ಥಾನ ಖಚಿತವಾಗಿ ಸಿಗಲಿದೆ ಎಂದು ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಎ.ವಿ.ತೀರ್ಥರಾಮ ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವಾಗ ಸಾರಾಯಿ ನಿಷೇಧ, ಲಾಟರಿ ನಿಷೇಧ ಮಾಡಿದ್ದೇವೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಸಂಪೂರ್ಣ ಮದ್ಯಪಾನ ನಿಷೇಧ ಮಾಡಲು ಸರಕಾರ ಮನಸ್ಸು ಮಾಡಬಹುದು ಎಂದು ಹೇಳಿದ ಅವರು ಕೇಂದ್ರ ಸರಕಾರಕ್ಕೆ ಅಡಿಕೆ ನಿಷೇಧ ವರದಿ ತಡೆ ನೀಡಿದೆ. ಅಡಿಕೆಯಲ್ಲಿ ಔಷಧಿಯ ಗುಣ ಇದೆ ಎಂದು ಸಂಸದ ಅಂನತ್ ಕುಮಾರ್ ಹೆಗಡೆ ಅವರ ನೇತೃತ್ವದಲ್ಲಿ ವರದಿ ನೀಡಲಾಗಿದೆ ಎಂದರು.
ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಚುನಾವಣೆಯನ್ನು ಅಧಿಕ ಅಂತರದಿಂದ ಗೆಲ್ಲಲು ಕಳೆದ 6 ತಿಂಗಳಿನಿಂದ ನಿರಂತರ ಬೂತ್ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದೇವೆ. 228 ಬೂತ್ಗಳಲ್ಲಿ ಕೂಡ ಕಾರ್ಯಕರ್ತರು ಮನೆ ಮನೆಗೆ ತೆರಳಿ ಕೇಂದ್ರ ಸರಕಾರದ ಯೋಜನೆ ಮತ್ತು ರಾಜ್ಯ ಸರ್ಕಾರದ ವೈಫಲ್ಯಗಳನ್ನು ತಿಳಿಸುತ್ತಿದ್ದೇವೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕೇಂದ್ರದಲ್ಲಿ ಬಿಜೆಪಿ ಸರಕಾರ ಇರುವ ಕಾರಣ ಅಭಿವೃದ್ದಿಗೆ ಸಹಕಾರಿ ಆಗಲಿದೆ. ಅನುದಾನಗಳು ಕೂಡ ಹೆಚ್ಚು ಬರಲಿದೆ. ರಾಜ್ಯದಲ್ಲಿ ೧೫೦+೨ ಸೀಟುಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಇಲ್ಲಿನ ಶಾಸಕರು ಮಂತ್ರಿ ಆಗಲಿದ್ದಾರೆ. ಸುಳ್ಯ ಕ್ಷೇತ್ರ ರಾಜ್ಯಕ್ಕೆ ಹಲವು ಕೊಡುಗೆಗಳನ್ನು ಕೊಟ್ಟಿದೆ. ಚುನಾವಣೆಯನ್ನು ಗೆಲ್ಲಲು ಮೂವತ್ತು ಮತದಾರರಿಗೆ ಒಬ್ಬ ಕಾರ್ಯಕರ್ತನನ್ನು ನೇಮಿಸಿದ್ದೇವೆ. ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 6500 ಕಾರ್ಯಕರ್ತರು ನಿಯೋಜನೆಗೊಂಡಿದ್ದಾರೆ. ಸುಳ್ಯ ಕ್ಷೇತ್ರಕ್ಕೆ ಇದೊಂದು ಪುನರ್ವರ್ತನೆ ಚುನಾವಣೆ ಬಿಜೆಪಿ ಇದನ್ನು ಕಂಡಿತ ಉಳಿಸಿಕೊಳ್ಳಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಮುಖಂಡರಾದ ಎಸ್.ಎನ್.ಮನ್ಮಥ, ವೆಂಕಟ್ ದಂಬೆಕೋಡಿ, ಎನ್.ಎ.ರಾಮಚಂದ್ರ, ಸುಭೋದ್ ಶೆಟ್ಟಿ ಮೇನಾಲ, ಸಂತೋಷ್ ಜಾಕೆ, ಮಹೇಶ್ ರೈ ಮೇನಾಲ, ಸುನೀತಾ ಡಿಸೋಜಾ, ಶ್ರೀನಾಥ್ ರೈ, ಪದ್ಮನಾಭ ಶೆಟ್ಟಿ ಪೆರುವಾಜೆ ಮೊದಲಾದವರು ಉಪಸ್ಥಿತರಿದ್ದರು.