ಬೆಳ್ತಂಗಡಿ, ಜು 09 (Daijiworld News/MSP): ಉಜಿರೆ ಟಿ.ಬಿ ಆಸ್ಪತ್ರೆಯನ್ನು ಕ್ವಾರೈಂಟೈನ್ ಕೇಂದ್ರವಾಗಿಸಲು ಸಿದ್ಧತೆ ನಡೆಸುತ್ತಿರುವುದನ್ನು ಗಮನಿಸಿ ಸ್ಥಳೀಯ ಕುಂಟಿನಿ ಪ್ರದೇಶದ ನಿವಾಸಿಗಳು ವಿರೋಧಿಸಿರುವ ಘಟನೆ ಉಜಿರೆ ಸನಿಹ ಗುರುವಾರ ನಡೆದಿದೆ.

ತುರ್ತು ಅವಶ್ಯಕತೆಗಾಗಿ ಆಸ್ಪತ್ರೆಯನ್ನು ಕ್ವಾರೆಂಟೈನ್ ಕೇಂದ್ರಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ ನೀಡಿದ್ದು, ಇದರಂತೆ ಜಿಲ್ಲಾಧಿಕಾರಿಗಳು, ಶಾಸಕ ಹರೀಶ್ ಪೂಂಜಾ ಹಾಗೂ ತಾಲೂಕು ಆಡಳಿತ ಟಿ.ಬಿ ಆಸ್ಪತ್ರೆಯನ್ನು ಕ್ವಾರಂಟೈನ್ ಕೇಂದ್ರವನ್ನಾಗಿಸಲು ಸಿದ್ಧತೆ ನಡೆಸುತ್ತಿದ್ದರು. ಇದರ ಮಾಹಿತಿ ತಿಳಿದು ಸ್ಥಳೀಯರು, ಇದರ ಸುತ್ತಮುತ್ತ ಚರಂಡಿ ವ್ಯವಸ್ಥೆ ಸರಿಪಡಿಸಬೇಕು ಮತ್ತು ಸೂಕ್ತ ಭದ್ರತೆ ಒದಗಿಸಬೇಕು ಎಂದು ಗುರುವಾರ ಬೆಳ್ತಂಗಡಿ ಠಾಣೆಗೆ ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶದಂತೆ ಟಿ.ಬಿ ಆಸ್ಪತ್ರೆಯನ್ನು ಕ್ವಾರೆಂಟೈನ್ ಕೇಂದ್ರವಾಗಿ ಮಾಡಲು ಸೂಚಿಸಿದ್ದು ಇದರಂತೆ ನಾನು ಮತ್ತು ತಾಲೂಕು ವೈದ್ಯಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ವರದಿ ನೀಡಿದ್ದೇವೆ. ಸ್ಥಳಿಯರು ಕೆಲವರು ವಿರೋಧ ವ್ಯಕ್ತಪಡಿಸಿದ್ದು ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದು ತಹಸೀಲ್ದಾರ್ ಮಹೇಶ್ ಜೆ. ತಿಳಿಸಿದ್ದಾರೆ.