ಉಡುಪಿ, ಜು 10 (DaijiworldNews/PY): ತಾಯಿ ಮೃತಪಟ್ಟರೂ ಉದ್ಯೋಗದಲ್ಲಿದ್ದ ಮಕ್ಕಳು ಬಾರದೇ ಇದ್ದ ಕಾರಣ ಸಾಮಾಜಿಕ ಕಾರ್ಯಕರ್ತರ ಸಹಾಯ ಪಡೆದು ಪತಿಯೇ ಅಂತ್ಯ ಸಂಸ್ಕಾರ ಮಾಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಎಚ್.ವೀಣಾ ಶಾನುಭೋಗ್ (69) ಎನ್ನಲಾಗಿದೆ.
ವೀಣಾ ಶಾನುಭೋಗ್ ಅವರು ಅನಾರೋಗ್ಯದ ಹಿನ್ನೆಲೆ ಅನೇಕ ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪತಿ ಎಚ್.ಶ್ರೀನಿವಾಸ್ (79) ಅವರು ಆರೈಕೆ ಮಾಡುತ್ತಿದ್ದರು.
ಸಾಮಾಜಿಕ ಕಾರ್ಯಕರ್ತ ಕೆ. ರಾಘವೇಂದ್ರ ಕಿಣಿ ಅವರು ಸಾಮಾಜಿಕ ಜಾಲತಾಣದಲ್ಲಿ ದಂಪತಿಗಳು ಸಹಾಯಕ್ಕೆ ಕೋರಿದ್ದ ಬಗ್ಗೆ ಗಮನಿಸಿ ದಂಪತಿಗಳಿಗೆ ನೆರವಾಗಿದ್ದಾರೆ.
ವೀಣಾ ಶಾನುಭೋಗ್ ಹಾಗೂ ಶ್ರೀನಿವಾಸ್ ಶಾನುಭೋಗ್ ಅವರು ಚಿಟ್ಟಾಡಿಯ ಭಾಗ್ಯಮಂದಿರದ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳು ಬಿ.ಎಡ್ ಮುಗಿಸಿ ಸಾಗರದಲ್ಲಿದ್ದು, ಮಗ ಬಿ.ಇ ಎಂಟೆಕ್ ಮುಗಿಸಿ ಬೆಂಗೂಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಆದರೆ, ದಂಪತಿಗಳ ಎರಡೂ ಮಕ್ಕಳು ಅನೇಕ ವರ್ಷಗಳಿಂದ ಇವರ ಸಂಪರ್ಕದಲ್ಲಿ ಇರಲಿಲ್ಲ.
ಗುರುವಾರದಂದು ವೀಣಾ ಅವರು ಸಾವನ್ನಪ್ಪಿದ್ದು, ಶ್ರೀನಿವಾಸ್ ಅವರು ಅಂತ್ಯಕ್ರಿಯೆ ಮಾಡಲು ಕಷ್ಟಪಡುತ್ತಿದ್ದರು. ಇವರ ಕಷ್ಟವನ್ನು ಗಮನಿಸಿದ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಕಿಣಿ, ಮಂಜುನಾಥ ನಿಟ್ಟೂರು, ಕಿಶೋರ್ ಕುಮಾರ್ ಕರಂಬಳ್ಳಿ ಹಾಗೂ ಮಂಜುನಾಥ್ ಹೆಬ್ಬಾರ್ ಅವರು ನೆರವಾಗಿದ್ದಾರೆ.