ಬಂಟ್ವಾಳ, ಜು 10 (DaijiworldNews/PY): ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ವಿಯಾಗಿ ಮುಗಿದ ಹಿನ್ನೆಲೆ ರಾಜ್ಯ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಪೊಳಲಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ಇಂದು ಭೇಟಿ ನೀಡಿ ಹರಕೆತೀರಿಸಿದರು.
ಈ ಸಂದರ್ಭ ದೇವಸ್ಥಾನದ ದ್ವಾರದ ಬಳಿ ಕಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ಕೌಶಿಕ್ ನನ್ನು ಭೇಟಿ ಮಾಡಿ ಮಾತನಾಡಿದ್ದು, ಆತನ ಪಠ್ಯೇತರ ಚಟುವಟಿಕೆಗಳ ಬಗ್ಗೆ ವಿಚಾರಿಸಿದರು. ಸಾಮಾಜಿಕ ಜಾಲತಾಣದಲ್ಲಿ ನಿನ್ನ ಸಾಧನೆಯ ಬಗ್ಗೆ ಬರೆದುಕೊಂಡಿದ್ದೆ ಎಂದು ತಿಳಿಸಿದರು. ಬಳಿಕ ಶಿಕ್ಷಣ ಸಚಿವರು ಆಪ್ತ ಸಹಾಯಕನನ್ನು ಕರೆದು ಫೋಟೊ ತೆಗೆಸಿಕೊಂಡರು.
ಶಿಕ್ಷಣ ಸಚಿವರು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡುವ ದಾರಿ ನಡುವೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿದ್ದು, ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಅವರೊಂದಿಗೆ ಮಾತುಕತೆ ನಡೆಸಿದರು. ಈ ಬಾರಿ ಕೊರೊನಾದಿಂದಾಗಿ ಶಿಕ್ಷಣಕ್ಕೆ ಅಡ್ಡಿಯಾಗಿದ್ದು, ಈ ವಿಚಾರವಾಗಿ ಶೈಕ್ಷಣಿಕ ಚಟುವಟಿಕೆಯ ಬಗ್ಗೆ ಮಾಹಿತಿ ಹಾಗೂ ಚರ್ಚೆ ನಡೆಸಿದ್ದಾರೆ.