ಬೆಳಗಾವಿ, ಏ 11: ಕೇಂದ್ರದ ಜತೆಗೆ ದೇಶದ 21 ರಾಜ್ಯಗಳಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಭಾರತೀಯ ಜನತಾ ಪಕ್ಷ ಕ್ಯಾನ್ಸರ್ ಇದ್ದಂತೆ ಎಂದು ಬಹುಭಾಷಾ ನಟ ಪ್ರಕಾಶ ರೈ ಲೇವಡಿ ಮಾಡಿದ್ದಾರೆ.
ಬಿಜೆಪಿ ಪಕ್ಷವೂ ದೇಶಕ್ಕೆ ಒಂದು ಮಾರಕ ರೋಗವಿದ್ದಂತೆ. ಕೇಂದ್ರದ ಜತೆಗೆ ದೇಶದ 21 ರಾಜ್ಯಗಳಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಭಾರತೀಯ ಜನತಾ ಪಕ್ಷ ದೇಶಕ್ಕೆ ಕ್ಯಾನ್ಸರ್ ರೋಗ ಆವರಿಸಿದಂತೆ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇಶದ ಉಳಿದೆಲ್ಲಾ ಪಕ್ಷಗಳು ನೆಗಡಿ ಕೆಮ್ಮು ಇದ್ದಂತೆ ಆದರೆ ಬಿಜೆಪಿ ಮಾತ್ರ ದೊಡ್ಡ ರೋಗವಾಗಿದ್ದು, ಬಿಜೆಪಿಗೆ ಮತ ಹಾಕದಂತೆ ಕೋರುತ್ತೇನೆ ಎಂದರು . ಬಿಜೆಪಿ ಕೋಮುವಾದಿ ಪಕ್ಷ. ಕೋಮುವಾದ ಪ್ರತಿಪಾದಿಸುವ, ಸಂವಿಧಾನ ಬದಲಿಸುತ್ತೇನೆ ಎಂದು ಹೇಳುವ ಪಕ್ಷ ಅಧಿಕಾರ ಬರಬಾರದು. ಪ್ರತಿಪಕ್ಷಗಳನ್ನು ನಾಯಿ, ಬೆಕ್ಕಿಗೆ ಹೋಲಿಕೆ ಮಾಡಿರುವ ಬಿಜೆಪಿ ಅಧ್ಯಕ್ಷರ ವಿರುದ್ಧ ಉತ್ತರ ಪ್ರದೇಶ ಸೇರಿದಂತೆ ಎಲ್ಲಡೆ ಆಂದೋಲನ ನಡೆಯುತ್ತಿದೆ. ಸದ್ಯ ಕೇಂದ್ರ ಸಹಿತ 21 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ 2019ರ ಚುನಾವಣೆಯಲ್ಲಿ ಬಿಜೆಪಿ ಸೋಲನ್ನನುಭವಿಸಲಿದೆ ಎಂದು ಹೇಳಿದರು.
ಕಾವೇರಿ ವಿವಾದದ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಕಾವೇರಿ ಹಾಗೂ ಮಹದಾಯಿ ಸಮಸ್ಯೆಗಳು ಬಗೆಹರಿಯದ ಸಮಸ್ಯೆಗಳೇನೂ ಅಲ್ಲ. ಈ ಎರಡೂ ಸಮಸ್ಯೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ರಾಜಕೀಯ ಕಾರಣಗಳಿಗಾಗಿ ಸಮಸ್ಯೆ ಹಾಗೆಯೇ ಉಳಿದಿದ್ದು, ಪಕ್ಷಗಳ ಮನಸ್ಥಿತಿ ಬದಲಾಗುವವರೆಗೂ ಸಮಸ್ಯೆ ಬಗೆಹರಿಯುವುದಿಲ್ಲ ಎಂದರು.