ಕುಂದಾಪುರ, ಜು 10 (Daijiworld News/MSP): ಆಶಾ ಕಾರ್ಯಕರ್ತೆಯರಿಗೆ ಮಾಸಿಕ 12 ಸಾವಿರ ಗೌರವಧನ ಖಾತರಿಪಡಿಸಬೇಕು, ಕೋವಿಡ್-19 ವಿರುದ್ಧ ಹೋರಾಟಕ್ಕೆ ಅಗತ್ಯವಿರುವ ಸುರಕ್ಷತಾ ಸಾಮಾಗ್ರಿಗಳನ್ನು ನೀಡಬೇಕು, ಕೋವಿಡ್-19ಗೆ ತುತ್ತಾದ ಆಶಾ ಕಾರ್ಯಕರ್ತೆಯರಿಗೆ ಪರಿಹಾರ, ಸಂಪೂರ್ಣ ಚಿಕಿತ್ಸೆ ನೀಡಬೇಕು ಎನ್ನುವ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ರಾಜ್ಯದಾದ್ಯಂತ ಜುಲೈ 10ರಿಂದ ಆರೋಗ್ಯ ಸೇವೆ ಸ್ಥಗಿತಗೊಳಿಸಿ ಅನಿರ್ದಿಷ್ಟ ಹೋರಾಟ ಆರಂಭಿಸಿದ್ದು ಕುಂದಾಪುರ ತಾಲೂಕಿನಲ್ಲಿ ಆಶಾ ಕಾರ್ಯಕರ್ತೆಯರು ಆರೋಗ್ಯ ಸೇವೆ ಸ್ಥಗಿತಗೊಳಿಸಿ ಹೋರಾಟ ಆರಂಭಿಸಿದ್ದಾರೆ.




ರಾಜ್ಯ ವ್ಯಾಪಿಯಾಗಿ ಜೂ.30ರಂದು ಮತ್ತು ಕಳೆದ ಒಂದು ವಾರದಿಂದ ತಾಲೂಕು, ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆಗಳನ್ನು ನಡೆಸಿ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರುಗಳಿಗೆ ಮತ್ತು ರಾಜ್ಯದ ಹಲವು ಸಚಿವರುಗಳಿಗೆ , ಶಾಸಕರಿಗೆ ಖುದ್ದಾಗಿ ಬೇಡಿಕೆ ಈಡೇರಿಗೆ ಒತ್ತಾಯಿಸಲಾಗಿದೆ. ಕಳೆದ ಜನವರಿ ತಿಂಗಳಿಂದ ಸರ್ಕಾರಕ್ಕೆ ಸಂಘದಿಂದ 10 ಮನವಿ ಪತ್ರಗಳು ಸಲ್ಲಿಸಲಾಗಿದೆ.
ಆಶಾ ಕಾರ್ಯಕರ್ತೆಯರ ಸಂಘದ ಮನವಿಗೆ ಸರ್ಕಾರ ಯಾವುದೇ ಸ್ಪಂದನ ನೀಡದೇ ಇರುವ ಹಿನ್ನೆಲೆಯಲ್ಲಿ ಜು.10ರಿಂದ ಅನಿರ್ದಿಷ್ಟವಧಿ ಪ್ರತಿಭಟನೆಗೆ ಮುಂದಾಗಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಆಯಾಯ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು ಅಲ್ಲಿನ ವೈದ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿ, ರಾಜ್ಯವ್ಯಾಪಿ ಅನಿರ್ದಿಷ್ಟವಧಿ ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ.