ಕಾಸರಗೋಡು, ಜು 10(DaijiworldNews/SM): ಜಿಲ್ಲೆಯಲ್ಲಿ ಸಂಪರ್ಕದಿಂದ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಶುಕ್ರವಾರ 17 ಮಂದಿಯಲ್ಲಿ ಪಾಸಿಟಿವ್ ಪತ್ತೆಯಾಗಿದ್ದು, ಈ ಪೈಕಿ 11 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ದೃಢಪಟ್ಟಿದೆ.

ತಲಾ ಮೂವರು ವಿದೇಶ ಹಾಗೂ ಹೊರ ರಾಜ್ಯಗಳಿಂದ ಬಂದವರಾಗಿದ್ದಾರೆ. ಚೆಂಗಳದ ಐವರು, ಕಾಸರಗೋಡಿನ ನಾಲ್ವರು, ಮಧೂರಿನ ಮೂವರು, ಮುಳಿಯಾರು, ಕುಂಬ್ಡಾಜೆ, ದೇಲಂಪಾಡಿ, ಮೊಗ್ರಾಲ್ ಪುತ್ತೂರು,ಕುಂಬಳೆ, ತ್ರಿಕ್ಕರಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
ಕಾಸರಗೋಡು ನಗರದ ತರಕಾರಿ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಚೆಂಗಳದ 22 ಮತ್ತು 24 ವರ್ಷದ ಇಬ್ಬರು ಯುವಕರು, ಮಧೂರಿನ 46 ಮತ್ತು 28 ವರ್ಷದ ವ್ಯಕ್ತಿಗಳಲ್ಲಿ ಸೋಂಕು ಪತ್ತೆಯಾಗಿದೆ. ಕಾಸರಗೋಡು ನಗರಸಭಾ ವ್ಯಾಪ್ತಿಯ ಒಂದೇ ಕುಟುಂಬದ ಮೂವರಿಗೆ ಸೋಂಕು ದ್ರಢಪಟ್ಟಿದೆ. 21 ವರ್ಷದ ಯುವಕ, 41 ವರ್ಷದ ಮಹಿಳೆ, ಆರು ವರ್ಷದ ಬಾಲಕ ಒಳಗೊಂಡಿದ್ದಾರೆ.
ಕಾಸರಗೋಡು ನಗರದ ಲ್ಲಿ ಹಣ್ಣು ಹಂಪಲು ಅಂಗಡಿ ಮಾಲಕ 25 ವರ್ಷದ ಕಾಸರಗೋಡು ನಗರ ನಿವಾಸಿ, ಕಾರು ಶೋರೂಂನ 35 ವರ್ಷದ ಕಾರ್ಮಿಕ, ಆರೋಗ್ಯ ಕಾರ್ಯಕರ್ತೆಯಾಗಿರುವ ಚೆಂಗಳದ 25 ವರ್ಷದ ಯುವತಿ, ಜೂನ್ 29ರಂದು ಮಂಗಳೂರಿನಿಂದ ಬಂದ 50 ವರ್ಷದ ಚೆಂಗಳ ನಿವಾಸಿ ಹಾಗೂ ಇವರ 20 ವರ್ಷದ ಮಗಳಿಗೆ ಸೋಂಕು ದೃಢಪಟ್ಟಿದೆ.
ವಿದೇಶದಿಂದ ಬಂದಿದ್ದ ಕುಂಬ್ಡಾಜೆ , ದೇಲಂಪಾಡಿ ಮತ್ತು ತ್ರಿಕ್ಕರಿಪುರ ನಿವಾಸಿಗಳು, ಹೊರರಾಜ್ಯದಿಂದ ಬಂದ ಕುಂಬಳೆಯಲ್ಲಿ ಹೊಲಿಗೆ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಉತ್ತರ ಪ್ರದೇಶ ನಿವಾಸಿ, ಬೆಂಗಳೂರಿನಿಂದ ಕಾರಿನಲ್ಲಿ ಬಂದ ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ನಿವಾಸಿಗೆ ಸೋಂಕು ಪತ್ತೆಯಾಗಿದೆ.
ನಾಲ್ವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ 567 ಮಂದಿಗೆ ಸೋಂಕು ದೃಢಪಟ್ಟಿದ್ದು, 427 ಮಂದಿ ಗುಣಮುಖರಾಗಿದ್ದಾರೆ. 140 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ 6712 ಮಂದಿ ನಿಗಾದಲ್ಲಿದ್ದು, 566 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ.