ಮಲ್ಪೆ, ಜು 11 (Daijiworld News/MSP): ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಲಕ್ಷ್ಮೀನಗರ ನಿವಾಸಿ ಯೋಗೀಶ್ ಮನೆಗೆ ಶಾಸಕ ಕೆ. ರಘುಪತಿ ಭಟ್ ಶುಕ್ರವಾರ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಶಾಸಕರು ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.


ಈ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷರಾದ ಮಹೇಶ್ ಠಾಕೂರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ನಗರ ಬಿಜೆಪಿಯ ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ್ ಶೆಟ್ಟಿ ತೆಂಕನಿಡಿಯೂರು ಮತ್ತು ಪಕ್ಷದ ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.
ಜುಲೈ 6 ರ ಭಾನುವಾರ ರಾತ್ರಿ 11.30 ರ ಸುಮಾರಿಗೆ ಕಾರಿನಲ್ಲಿ ಆಗಮಿಸಿದ ಗ್ಯಾಂಗ್ನಿಂದ ಯೋಗೀಶ್ ಮೇಲೆ ಮಾರಣಾಂತಿಕ ಆಯುಧದಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು.ಕೊಲೆ ಬಗ್ಗೆ ಮಾಹಿತಿ ದೊರೆತ ಕೂಡಲೇ ಮಲ್ಪೆ ಪೊಲೀಸರು ಕಾರ್ಯಪ್ರವೃತ್ತರಾಗಿ ಪ್ರಕರಣವನ್ನು ಭೇದಿಸಿ ಜುಲೈ 7 ರ ಮಂಗಳವಾರ ತಡರಾತ್ರಿ ನಾಲ್ವರನ್ನು ಬಂಧಿಸಿದ್ದರು.