ಕಾಸರಗೋಡು, ಜು 11 (Daijiworld News/MSP): ಜಿಲ್ಲೆಯಲ್ಲಿ ಸಂಪರ್ಕದಿಂದ ಕೊರೊನಾ ಸೋಂಕು ಹರಡುತ್ತಿರುವ ಹಿನ್ನಲೆಯಲ್ಲಿ ಪ್ರಮುಖ ಮಾರುಕಟ್ಟೆಗಳನ್ನು ಜು.11 ರಿಂದ 17 ರ ಒಂದು ವಾರಗಳ ಅವಧಿಗೆ ಸಂಪೂರ್ಣ ಮುಚ್ಚುವಂತೆ ಜಿಲ್ಲಾಧಿಕಾರಿ ಡಾ.ಸಜಿತ್ ಬಾಬು ಆದೇಶಿಸಿದ್ದಾರೆ.


ಕಾಲಿ ಕಡವು ಮೀನು -ತರಕಾರಿ ಮಾರುಕಟ್ಟೆ , ಚೆರ್ಕಳಪೇಟೆ, ಕಾಞಂಗಾಡ್ ಮೀನು ಮತ್ತು ತರಕಾರಿ ಮಾರುಕಟ್ಟೆ ತ್ರಿಕ್ಕರಿಪುರ ನೀಲೇಶ್ವರ,ಕುಂಬಳೆ, ಕಾಸರಗೋಡು ತರಕಾರಿ ಮತ್ತು ಮೀನು ಮಾರುಕಟ್ಟೆ , ಕುಂಜತ್ತೂರು ಮಾಡದಲ್ಲಿರುವ ಮೀನು ಮಾರುಕಟ್ಟೆ, ಉಪ್ಪಳ ಮೀನು ಮಾರುಕಟ್ಟೆ , ಉಪ್ಪಳ ಹನಫಿ ಬಜಾರ್ ತರಕಾರಿ ಅಂಗಡಿ, ಮಜೀರ್ ಪಳ್ಳ ತರಕಾರಿ ಅಂಗಡಿ ಗಳನ್ನು ಜುಲೈ 17 ರ ತನಕ ಮುಚ್ಚಲಾಗಿದ್ದು , ಕಾಸರಗೋಡು ನಗರದಲ್ಲಿ ಮಾರುಕಟ್ಟೆ ಪ್ರವೇಶದ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗಿದೆ.
ಶುಕ್ರವಾರ ನಗರದ ಐವರು ವ್ಯಾಪಾರಿಗಳು ಸೇರಿದಂತೆ 11 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ನಾಲ್ಕು ತರಕಾರಿ ಅಂಗಡಿ ಹಾಗೂ ಒಂದು ಜೀನಸು ಅಂಗಡಿ ಸೇರಿ 5 ಮಂದಿಗೆ ಕೋವಿಡ್ ಬಾಧಿಸಿದೆ. ಸಂಪರ್ಕದಿಂದ ಸೋಂಕು ಹರಡುತ್ತಿರುವುದರಿಂದ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ಗಳನ್ನು ತೆಗೆದು ಕೊಂಡಿದ್ದು , ಶುಕ್ರವಾರ ಸಂಜೆ ಜಿಲ್ಲಾಧಿಕಾರಿ ಡಾ . ಡಿ . ಸಜಿತ್ ಬಾಬು , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ .ಶಿಲ್ಪಾ , ಜಿಲ್ಲಾ ವೈದ್ಯಾಧಿಕಾರಿ ಡಾ . ರಾಮ್ ದಾಸ್ ನೇತೃತ್ವದಲ್ಲಿ ತುರ್ತು ಸಭೆ ಸೇರಿ ಮುಂದಿನ ಕ್ರಮಗಳ ಕುರಿತು ಚರ್ಚಿಸಿತ್ತು. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಕಠಿಣ ಕ್ರಮ ಗಳನ್ನು ತೆಗೆದುಕೊಳ್ಳಲಾಗಿದೆ.