ಬಂಟ್ವಾಳ, ಜು 11 (DaijiworldNews/PY): ಜು 19ರಂದು ಬೆಳಗ್ಗೆ 6 ಗಂಟೆಯಿಂದ ಜು 21ರಂದು ಬೆಳಗ್ಗೆ 9 ಗಂಟೆಯವರೆಗೆ ಕಾರಿಂಜ ಶ್ರೀಮಹತೋಭಾರ ಕಾರಿಂಜೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ದೇವರ ದರ್ಶನ ಹಾಗೂ ಆಟಿ ಅಮಾವಾಸ್ಯೆ ಪ್ರಯುಕ್ತ ನಡೆಯುವ ತೀರ್ಥಸ್ನಾನಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ನೋಣಯ್ಯ ನಾಯ್ಕ್ ಹೇಳಿದ್ದಾರೆ.

ಈ ಬಗ್ಗೆ ಜು 7ರಂದು ಶ್ರೀ ಕ್ಷೇತ್ರ ಕಾರಿಂಜದಲ್ಲಿ ದೇಗುಲದ ಅರ್ಚಕರು, ಗ್ರಾಮಣಿಗಳು ಹಾಗೂ ಗ್ರಾಮಸ್ಥರು ಸೇರಿ ಸಭೆ ಸೇರಿದ್ದು, ಈ ವಿಚಾರವಾಗಿ ನಿರ್ಧಾರ ಮಾಡಲಾಗಿದೆ. ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು, ಈ ವೇಳೆ ಸಾಮಾಜಿಕ ಅಂತರ ಪಾಲನೆ ಕಷ್ಟವಾಗುವ ಕಾರಣ ತೀರ್ಥಸ್ನಾನ ನಿಷೇಧ ಮಾಡುವುದು ಅನಿವಾರ್ಯವಾಗಿದೆ ಎಂಬುದಾಗಿ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ.
ಸಭೆಯಲ್ಲಿ, ಗ್ರಾಮಣಿ ಗಣಪತಿ ಮುಚ್ಚಿನ್ನಾಯ, ಪ್ರ.ಅರ್ಚಕ ಮಿಥುನ್ ಭಟ್, ಅರ್ಚಕ ಜಯಶಂಕರ ಉಪಾಧ್ಯಾಯ, ಕಾವಳಮೂಡೂರು ಪಿಡಿಒ ಧನಂಜಯ, ಶಿವಪ್ಪ ಗೌಡ ನಿನ್ನಿಕಲ್ಲು, ಪುಂಜಾಲಕಟ್ಟೆ ಪೊಲೀಸ್ ಠಾಣಾ ಸಿಬ್ಬಂದಿ, ಮ್ಯಾನೇಜರ್ ಸತೀಶ್ ಪ್ರಭು ಇದ್ದರು.