ಮಂಗಳೂರು, ಜು 11 (Daijiworld News/MSP): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ ಇಳಿವಯಸ್ಸಿನಿಂದ ಎಳೆವಯಸ್ಸಿನವರೆಗೂ ಮೃತಪಟ್ಟಿರುವುದು ಆತಂಕಕಾರಿ ವಿಚಾರ. ಈ ಹಿನ್ನಲೆಯಲ್ಲಿ ಸಾವಿನ ನಿಖರ ಕಾರಣ ನಿರ್ಧರಿಸಲು ತಜ್ಞರ ಸಮಿತಿ ರಚಿಸಿದ್ದು , 13 ಮಂದಿ ವೈದ್ಯಾಧಿಕಾರಿಗಳ ತಂಡ ಈ ಬಗ್ಗೆ ತನಿಖೆ ನಡೆಸಲಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ವೈದ್ಯಾಧಿಕಾರಿಗಳೊಂದಿಗೆ ಸಭೆಯ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ಸಾವಿನ ಬಗ್ಗೆ 13 ಮಂದಿ ವೈದ್ಯಾಧಿಕಾರಿಗಳ ತನಿಖೆ ನಡೆಸಿ ಸಾವಿನ ನಿಖರ ಕಾರಣ ನಿರ್ಧರಿಸಿ ವರದಿ ನೀಡಲಿದೆ ಎಂದರು.
ಇದೇ ವೇಳೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ ವೈದ್ಯಾಧಿಕಾರಿಗಳು, ದ.ಕ. ಜಿಲ್ಲೆಯಲ್ಲಿ ಜು.10ರ ಶುಕ್ರವಾರದವರೆಗೆ 36 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಈ ಪೈಕಿ ಮೂರು ಮಂದಿ ಭಟ್ಕಳ ಮೂಲದವರಾಗಿದ್ದರೆ, ಇನ್ನುಳಿದ ಒಬ್ಬರು ಚಿತ್ರದುರ್ಗ ಹಾಗೂ ಒಬ್ಬರು ಮಡಿಕೇರಿಯ ಮೂಲದವರಾಗಿದ್ದಾರೆ.
ಜಿಲ್ಲೆಯಲ್ಲಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರು ಒಂಬತ್ತು ಮಂದಿ ಮೃತರಾಗಿದ್ದರೆ.50 ಕ್ಕಿಂತ 60 ವರ್ಷದೊಳಗೆ ಹತ್ತು ಮಂದಿ ಸಾವನ್ನಪ್ಪಿದ್ದಾರೆ. 60 ಕ್ಕಿಂತ 70 ವರ್ಷದೊಳಗೆ 11 ಮಂದಿ ಮೃತಪಟ್ಟಿದ್ದಾರೆ. 70ಕ್ಕಿಂತ ವರ್ಷಕ್ಕಿಂತ ಮೇಲ್ಪಟ್ಟ ಒಬ್ಬರು ಸಾವನ್ನಪ್ಪಿದ್ದಾರೆ. ಸಾವಿಗೀಡಾದ 36 ಜನರ ಪೈಕಿ 26 ಜನರ ಇತರ ಖಾಯಿಲೆಗಳಿಂದ ಬಳಲಿ ಸಾವನ್ನಪ್ಪಿದ್ದಾರೆ. 4 ಜನರು ಬೇರೆ ಕಾರಣಗಳಿಂದ ಮೃತಪಟ್ಟಿದ್ದಾರೆ. 4 ಜನರು ಮಾತ್ರ ಕೋವಿಡ್ ನ್ಯುಮೋನಿಯಾದಿಂದ ಸಾವನ್ನಪ್ಪಿದ್ದಾರೆ. ಒಬ್ಬರು ಕೋವಿಡ್ ಅಲ್ಲದೆ ಸಾವನ್ನಪ್ಪಿದ್ದಾರೆ ಎಂದು ಹೇಳಿದರು.