ಉಡುಪಿ, ಜು 11 (Daijiworld News/MSP): ಉಡುಪಿಯ ಕಲ್ಸಂಕ- ಅಂಬಾಗಿಲು ರಸ್ತೆಯನ್ನು ತಮ್ಮ ಕಟ್ಟ್ಟಡ ನಿರ್ಮಾಣಕ್ಕೆ ಸಂಬಂಧಿಸಿ ಕೆಸರು ಮಯಗೊಳಿಸಿದ ಒಂದು ಪ್ರತಿಷ್ಟಿತ ಬಿಲ್ಡರ್ಸ್ ಕಂಪನಿಗೆ, ಉಡುಪಿ ನಗರಸಭೆಯು ಜುಲೈ 9 ಕ್ಕೆ ನೋಟೀಸ್ ಜಾರಿ ಮಾಡಿ ರೂ 25,000 ದಂಡ ವಸೂಲಿ ಮಾಡಿದೆ.


ಕೆಲವು ದಿನಗಳಿಂದ ಕಲ್ಸಂಕ-ಗುಂಡಿಬೈಲು ರಸ್ತೆಯ ಬಳಿ ಡಿ ಮಾರ್ಟ್ ಕಂಪನಿಯು ಕಟ್ಟಡದ ನಿರ್ಮಾಣಕ್ಕೆ ಸಂಬಂಧಿಸಿ ಅಗೆದ ಮಣ್ಣನ್ನು ಲಾರಿಯಲ್ಲಿ ಸಾಗಿಸುವಾಗ ರಸ್ತೆಯ ತುಂಬೆಲ್ಲಾ ಚೆಲ್ಲಿ ಕೆಸರುಮಯ ಮಾಡಿತ್ತು. ಇದರಿಂದ ದ್ವಿ ಚಕ್ರ ವಾಹನ ಸವಾರರು ಸಿಕ್ಡ್ ಆಗಿ ಬೀಳುವ ಬಗ್ಗೆ, ಪಾದಾಚಾರಿಗಳಿಗೆ ನಡೆಯಲು ತೊಂದರೆಯಾಗುತ್ತಿರುವ ಬಗ್ಗೆ ಸಾರ್ವಜನಿಕರು ಅನೇಕ ಬರಿ ನಗರಸಭೆಗೆ ದೂರು ನೀಡುತ್ತಿದ್ದರು.
ಈ ನಿಟ್ಟಿನಲ್ಲಿ, ನಗರಸಭೆಯ ಇಂಜಿನಿಯರ್ ಮೋಹನ್ ರಾಜ್ ಕೂಡಲೇ ಸ್ಫಂದಿಸಿ, ರೂ 25000 ದಂಡ ಕಟ್ಟುವಂತೆ, ಇಲ್ಲದಿದ್ದರೆ ಕಾಮಗಾರಿಯನ್ನು ತಕ್ಷಣ ಸ್ಥಗಿತ ಗೊಳಿಸಬೇಕೆಂದು, ಮೂರು ದಿನಗಳ ಅವಧಿ ನೀಡಿ ಶುಕ್ರವಾರದಂದು ನೋಟೀಸ್ ಜಾರಿ ಮಾಡಿದ್ದರು.
ಆದರೆ ಕಂಪನಿಯವರು ಕೂಡಲೇ ದಂಡವನ್ನು ನಗರಸಭೆಗೆ ಪಾವತಿಸಿದ್ದಾರೆ, ಅಲ್ಲದೆ ಮುಂದೆ ಕಾಮಗಾರಿಯಿಂದ ಏನಾದರು ಸಮಸ್ಯೆಯಾದರೆ, ಅಲ್ಲದೆ ಕೆಸರುಮಯವಾದರೆ ಕಂಪನಿಯೇ ಸ್ವಚ್ಚಗೊಳಿಸಬೇಕು ಎಚ್ಚರಿಕೆ ನೀಡಿದೆ. ಅಲ್ಲದೆ ಸಾರ್ವಜನಿಕರಿಂದ ದೂರು ಬಂದರೆ ಮತ್ತೆ ದಂಡ ವಿಧಿಸುವುದಾಗಿ, ನಗರಸಭೆಯು ಮುಚ್ಚಲಿಕೆ ಪತ್ರವನ್ನ ಬಿಲ್ಡರ್ಸ್ ಕಂಪನಿಯಿಂದ ಬರೆದುಕೊಂಡಿರುವುದಾಗಿ ಇಂಜಿನಿಯರ್ ಮೋಹನ್ ರಾಜ್ ತಿಳಿಸಿದ್ದಾರೆ.