ಏ,12: ಕಾವೇರಿ ನಿರ್ವಹಣಾ ಮಂಡಳಿ ರಚಿಸಲೇಬೇಕು ಎಂದು ಪಟ್ಟು ಹಿಡಿದು ತಮಿಳುನಾಡಿನಲ್ಲಿ ನಡೆಯುತ್ತಿರುವ ಹೋರಾಟದ ಕಾವು ರಾಜ್ಯಕ್ಕೂ ಹಬ್ಬುತ್ತಿದ್ದು, ಎರಡೂ ರಾಜ್ಯಗಳ ನಡುವೆ ವಿವಾದದ ಕಿಡಿ ಮತ್ತೊಮ್ಮೆ ಹೊತ್ತಿಕೊಳ್ಳುವ ಅಪಾಯ ಎದುರಾಗಿದೆ. ತಮಿಳುನಾಡಿನ ಸರ್ಕಾರ ’ಕಾವೇರಿ ನಿರ್ವಹಣಾ ಮಂಡಳಿಯನ್ನೇ ರಚಿಸಬೇಕು ಎಂದು ಪಟ್ಟು ಹಿಡಿದಿದೆ. ಕಾವೇರಿ ನಿರ್ವಹಣಾ ಮಂಡಳಿ ರಚನೆಯನ್ನು ಕರ್ನಾಟಕ ತೀವ್ರವಾಗಿ ವಿರೋಧಿಸುತ್ತಿದೆ. ಈ ನಡುವೆ ಕಾವೇರಿ ನಿರ್ವಹಣಾ ಮಂಡಳಿ ಹೋರಾಟದ ಕಾವು ತಮಿಳುನಾಡಿಗೆ ಇಂದು ಭೇಟಿ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಗೂ ತಟ್ಟಿದೆ. ರಕ್ಷಣಾ ಎಕ್ಸಫೋ ಉದ್ಘಾಟನೆ ಮಾಡಲು ಆಗಮಿಸಿರುವ ಪ್ರಧಾನಿ ಮೋದಿ ವಿರುದ್ಧ ಹಾಗೂ ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕೆಂದು ಒತ್ತಾಯಿಸಿ ವಿವಿಧ ಪಕ್ಷದ ಮುಖಂಡರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನು ಪ್ರಧಾನಿ ಮೋದಿ ಚೆನ್ನೈ ಏರ್ಪೋರ್ಟ್ಗೆ ಬಂದಿಳಿಯುತ್ತಿದ್ದಂತೆ ಕಪ್ಪು ಬಾವುಟ ಪ್ರದರ್ಶಿಸಿ ಗೋ ಬ್ಯಾಕ್ ಎಂದು ಕೂಗಿರುವ ಘಟನೆ ಸಹ ನಡೆದಿದೆ. ಪ್ರಧಾನಿ ಮೋದಿ ಚೆನ್ನೈ ಏರ್ಪೋರ್ಟ್ಗೆ ಆಗಮಿಸುತ್ತಿದ್ದಂತೆ ಡಿಎಂಕೆ ಪಕ್ಷದ ಮುಖಂಡರು ಕಪ್ಪು ಬಾವುಟ ಪ್ರದರ್ಶಿಸಿ ಹೋರಾಟಕ್ಕಿಳಿದರು. ಆದರೆ ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.