ಬೆಳ್ತಂಗಡಿ, ಜು 11 (DaijiworldNews/PY): ಕೊರೊನಾ ಮುಕ್ತವಾಗಿಸಬೇಕು ಎಂಬ ಉದ್ದೇಶದಿಂದ ಜನತೆ ಇಚ್ಛಿಸಿದಂತೆ ಜು. 14 ರಿಂದ ಜು. 28ರವರೆಗೆ ಮಧ್ಯಾಹ್ನ 2 ಗಂಟೆಯಿಂದ ಮರುದಿನ ಬೆಳಿಗ್ಗೆ 7 ಗಂಟೆಯವರೆಗೆ ತಾಲೂಕಿನಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡುವ ತೀರ್ಮಾನವನ್ನು ಶನಿವಾರ ಇಲ್ಲಿನ ಮಂಜುನಾಥ ಕಲಾಭವನದಲ್ಲಿ ನಡೆದ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳ ಸಭೆಯಲ್ಲಿ ತೀರ್ಮಾನಿಸಲಾಯಿತು.


ಇದಕ್ಕೂ ಮೊದಲು ಎರಡು ದಿನಗಳ ಹಿಂದೆ 48 ಗ್ರಾ.ಪಂ.ಗಳ ಪಿಡಿಓಗಳ ಮೂಲಕ ಪ್ರತಿಯೊಂದು ಗ್ರಾ.ಪಂ.ಗಳಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ತಾಲೂಕಿನ 81 ಗ್ರಾ.ಪಂ. ತೀರ್ಮಾನದಂತೆ ಜು.14 ರಿಂದ ಅರ್ಧ ದಿನ ಲಾಕ್ ಡೌನ್ ಮಾಡುವುದೆಂದು ಶಾಸಕರು ಪ್ರಕಟಿಸಿದರು. ಜು.13 ರಂದು ಪಂ.ಗಳು ಲಾಕ್ ಡೌನ್ ನಿಯಮಾವಳಿಗಳನ್ನು ರೂಪಿಸಿ ಜನತೆಗೆ ತಿಳಿಸುವ ಕೆಲಸ ಮಾಡುವ ನಿರ್ಧಾರಕ್ಕೆ ಬರಲಾಯಿತು. ಲಾಕ್ ಡೌನ್ ಬಗ್ಗೆ ಮಾಹಿತಿಯನ್ನು ಧ್ವನಿವರ್ಧಕದ ಮೂಲಕ ತಾಲೂಕು ಆಡಳಿತ ಭಾನುವಾರ ಹಾಗೂ ಸೋಮವಾರ ಮಾಡಲಿದೆಯೆಂದು ಶಾಸಕರು ತಿಳಿಸಿದರು.
ಕೊರೊನಾ ಮುಕ್ತ ತಾಲೂಕು ಆಗಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಪ್ರಯತ್ನ ಅಗತ್ಯ. ಕೊರೊನಾ ಹೆಚ್ಚಾಗದಂತೆ ಪ್ರತಿಯೊಬ್ಬರಲ್ಲಿ ಜಾಗೃತಿ ಮೂಡಿಸಬೇಕು. ಪ್ರತಿ ಬೂತ್ನಲ್ಲಿ ಕೊರೊನಾ ಸೈನಿಕರ ತಂಡವನ್ನು ರಚಿಸಲಾಗುವುದು ಎಂದು ಶಾಸಕರು ಮಾಹಿತಿ ನೀಡಿದರು. ತಾಲೂಕಿನ 9 ಖಾಸಗಿ ಆಸ್ಪತ್ರೆಗಳಲ್ಲಿ ಮಂಗಳವಾರದಿಂದ ಮಧ್ಯಾಹ್ನ 2 ಗಂಟೆಯಿಂದ ಮರುದಿನ ಬೆಳಿಗ್ಗೆ 8 ಗಂಟೆವರೆಗೆ ಹೊರ ರೋಗಿ ವಿಭಾಗ ಲಭ್ಯವಿರುವುದಿಲ್ಲ ಮತ್ತು ತುರ್ತು ಸೇವೆ, ಅಪಘಾತ ವಿಭಾಗ, ನೊಂದಾವಣೆ ವಿಭಾಗಗಳು ಎಂದಿನಂತೆ 24 ಗಂಟೆ ಕರ್ತವ್ಯ ನಿರ್ವಹಿಸಲಿವೆ ಎಂದು ವೈದ್ಯ ಪ್ರತಿನಿಧಿಗಳು ಮಾಹಿತಿ ನೀಡಿದರು. ಕೂಲಿ ಕಾರ್ಮಿಕರಿಗೆ ಪ್ರತ್ಯೇಕ ವ್ಯವಸ್ಥೆ ಮಾಡುವ ನಿರ್ಣಯಕ್ಕೆ ಬರಲಾಯಿತು.
ಕೊನೆಗೆ ಶಾಸಕರು ಎಲ್ಲರ ಅಭಿಪ್ರಾಯ ಕ್ರೋಢಿಕರಿಸಿ 15 ದಿನಗಳ ಕಾಲ ಮಧ್ಯಾಹ್ನ 2 ಗಂಟೆಯ ನಂತರ ಸ್ವಯಂ ಘೋಷಿತ ಲಾಕ್ ಡೌನ್ ಎಂಬ ತೀರ್ಮಾನಕ್ಕೆ ಬಂದರು. ಈ ಲಾಕ್ ಡೌನ್ ಯಾವುದೆ ಒತ್ತಾಯ ಪೂರ್ವಕ ಅಲ್ಲ ಬದಲಿಗೆ ಜನ ಜಾಗರಣ ಅಭಿಯಾನವಾಗಿ ಕೊರೊನಾ ನಿಯಂತ್ರಣ ಮಾಡುವಲ್ಲಿ ನಿರ್ಣಯ ಮಾಡೋಣ ಎಂಬ ಎಲ್ಲ ಜನರ ಒಕ್ಕೊರೊಲಿನ ಜನಧ್ವನಿಯಾಗಿ ಶಾಸಕರು ಘೋಷಿಸಿದರು.
ಇಂದು ಸಭೆಯಲ್ಲಿ ಕೈ ಗೊಂಡ ನಿರ್ಣಯ ನಾನು ಮಾಡಿರುವುದಲ್ಲ. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬ ಪ್ರಶ್ನೆಗೆ ಉತ್ತರವಾಗಿ ನಾವೇ ಗಂಟೆ ಕಟ್ಟಿದರೆ ಮಾತ್ರ ಬದುಕುಳಿಯಲು ಸಾಧ್ಯ ಎಂಬ ನಿಲುವಿಗೆ ಬರಲಾಗಿದೆ. ಸಮಾಜವನ್ನು ರಕ್ಷಣೆ ಮಾಡಲು ನಾವೇ ತೆಗೆದುಕೊಂಡ ನಿರ್ಣಯ ಇದು. ಮಂಗಳವಾರದಿಂದ ತಾಲೂಕಿನಲ್ಲಿ ಲಾಕ್ ಡೌನ್ ಅನ್ನು ನಿಯಂತ್ರಣ ಮಾಡುವವರು ಜನರೇ ಹೊರತು ಅಧಿಕಾರಿಗಳಲ್ಲ, ಪೋಲಿಸರಲ್ಲ. ಜನರಿಗೆ ಉತ್ತರ ಕೊಡಬೇಕಾದ್ದು ಇಲ್ಲಿ ಸೇರಿದ ಎಲ್ಲರ ಜವಾಬ್ದಾರಿಯಾಗಿದೆ. ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಈ ಜನಜಾಗರಣದ ಅಭಿಯಾನದಲ್ಲಿ ಭಾಗವಹಿಸಿ ಕೊರೊನಾ ವಿರುದ್ಧ ಹೋರಾಟಕ್ಕೆ ನಾಂದಿ ಹಾಡೋಣ ಎಂದು ಶಾಸಕರು ತಿಳಿಸಿದರು.
ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಿದ್ಧ ಸಭೆಯಲ್ಲಿ ತಾಲೂಕಿನ ಗ್ರಾ.ಪಂ. ಪಿಡಿಓಗಳು, ವರ್ತಕ, ಅಟೋರಿಕ್ಷಾ, ಜೀಪು, ಖಾಸಗಿ ಬಸ್ಸು, ಹೋಟೇಲ್, ಆಸ್ಪತ್ರೆ , ಪತ್ರಕರ್ತ, ಸಂಘ-ಸಂಸ್ಥೆ ಪ್ರತಿನಿಧಿಗಳಲ್ಲದೆ ಜನಪ್ರತಿನಿಧಿಗಳು, ಸರಕಾರಿ ಅಧಿಕಾರಿಗಳು ಭಾಗವಹಿಸಿದ್ದರು.
ವೇದಿಕೆಯಲ್ಲಿ ತಹಶೀಲ್ದಾರ್ ಮಹೇಶ್ ಜೆ, ಕಾರ್ಯನಿರ್ವಾಹಣಾಧಿಕಾರಿ ಜಯರಾಮ್, ನ.ಪಂ ಮುಖ್ಯಾಧಿಕಾರಿ ಸುಧಾಕರ್, ಜಿ.ಪಂ ಸದಸ್ಯ ಕೊರಗಪ್ಪ, ಆರೋಗ್ಯಾಧಿಕಾರಿ ಡಾ.ಕಲಾಮಧು ಉಪಸ್ಥಿತರಿದ್ದರು.
ತಾಲೂಕಿನ ಪ್ರತಿ ಗ್ರಾಮ ಪಂಚಾಯತ್ ನಿಂದ ತಲಾ ಇಬ್ಬರು ಪ್ರತಿನಿಧಿಗಳು, ನ.ಪಂ, ತಾ.ಪಂ, ಜಿ.ಪಂ ಸದಸ್ಯರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.