ಮಂಗಳೂರು, ಏ 12 : ಸಂಸತ್ತಿನ ಬಜೆಟ್ ಅಧಿವೇಶನವನ್ನು ನಿರಂತರ ಭಂಗ ಉಂಟುಮಾಡಿದ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳ ಧೋರಣೆ ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಉಪವಾಸ ಸತ್ಯಾಗ್ರಹದ ಕರೆಯಂತೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯಿಂದ ಪುರಭವನದ ಗಾಂಧಿ ಪ್ರತಿಮೆ ಎದುರು ಇಂದು ಉಪವಾಸ ಸತ್ಯಾಗ್ರಹ ಕೈಗೊಂಡರು. ಸಂಸದ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಬೆಳಗ್ಗೆ 10 ಗಂಟೆಗೆ ಆರಂಭಗೊಂಡು ಸಂಜೆ 5 ಗಂಟೆಯ ತನಕ ನಡೆಯಲಿದೆ.
ಈ ಸಂದರ್ಭ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಕ್ಷುಲ್ಲಕ ರಾಜಕಾರಣಕ್ಕಾಗಿ ದೇಶದ ಹಿತ ಬಲಿಕೊಡುತ್ತಿರುವ ಕಾಂಗ್ರೆಸ್ ಪಕ್ಷ ಬ್ರಿಟಿಷರನ್ನು ಮೀರಿಸುತ್ತಿದೆ. ಮಹಾತ್ಮ ಗಾಂಧೀಜಿ ಅವರ ಕನಸಿನಂತೆ ಗ್ರಾಮ ಸ್ವರಾಜ್ಯ, ಅಭಿವೃದ್ಧಿ, ಉನ್ನತಿಯಲ್ಲಿ ಭಾರತವನ್ನು ಮುನ್ನಡೆಸುವ ಕಾರ್ಯ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯುತ್ತಿದೆ ಆದರೆ ಇದನ್ನು ಸಹಿಸಲಾಗದೆ ಕಾಂಗ್ರೆಸ್ ಸಂಸತ್ತಿನಲ್ಲಿ ಕೋಲಾಹಲ ನಡೆಸುತ್ತಿದ್ದಾರೆ. ಈ ಬಾರಿ ಸಂಸತ್ ಅಧಿವೇಶನ ನಡೆಯದ ಹಿನ್ನೆಲೆಯಲ್ಲಿ ನಾವು ನಮ್ಮ ಭತ್ಯೆ ಪಡೆದುಕೊಳ್ಳುತ್ತಿಲ್ಲ. ಸಾಧ್ಯವಾದರೆ ಕಾಂಗ್ರೆಸ್ ಕೂಡಾ ಹಾಗೆಯೇ ನಡೆದುಕೊಳ್ಳಲಿ ಎಂದರು . ಇದೇ ವೇಳೆ ಬಿಜೆಪಿಯ ಹಲವು ಮುಖಂಡರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮೋನಪ್ಪ ಭಂಡಾರಿ, ವೇದವ್ಯಾಸ ಕಾಮತ್, ಪ್ರಭಾಕರ ಬಂಗೇರ, ರುಕ್ಮಯ ಪೂಜಾರಿ, ಎನ್.ಯೋಗೀಶ್ ಭಟ್, ಬಾಲಕೃಷ್ಣ ಭಟ್, ಬೃಜೇಶ್ ಚೌಟ, ಕಿಶೋರ್ ರೈ, ಉಮಾನಾಥ ಕೋಟ್ಯಾನ್, ಚಂದ್ರಹಾಸ ಉಳ್ಳಾಲ್, ಪೂಜಾ ಪೈ, ನಿತಿನ್ ಕುಮಾರ್, ಸಂತೋಷ್ ಕುಮಾರ್ ಬೋಳಿಯಾರ್, ಜಿತೇಂದ್ರ ಕೊಟ್ಟಾರಿ, ಹರಿಕೃಷ್ಣ ಬಂಟ್ವಾಳ್, ಡಾ.ಭರತ್ ಶೆಟ್ಟಿ, ಸತ್ಯಜಿತ್ ಸುರತ್ಕಲ್, ರಾಮಚಂದರ್ ಬೈಕಂಪಾಡಿ, ಸತೀಶ್ ಪ್ರಭು, ಸುಚರಿತ ಶೆಟ್ಟಿ ಮತ್ತಿತರು ಉಪವಾಸ ಸತ್ಯಾಗ್ರಹಕ್ಕೆ ಸಾಥ್ ನೀಡಿದರು.