ಮಂಗಳೂರು, ಜು.12 (DaijiworldNews/MB) : ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವ ನಿಟ್ಟಿನಲ್ಲಿ ''ಬೆಂಗಳೂರಿನಂತೆ ಇಲ್ಲೂ ಲಾಕ್ ಡೌನ್ ಮಾಡಿ'' ಎಂದು ಶಾಸಕ ಯು.ಟಿ. ಖಾದರ್ ಅವರು ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರಲ್ಲಿ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

''ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪನವರೇ ದಕ್ಷಿಣ ಕನ್ನಡ ಜಿಲ್ಲೆಯ ಪರಿಸ್ಥಿತಿ ದಿನೇ ದಿನೇ ಕೈ ಮೀರುತ್ತಿದೆ. ಬೆಂಗಳೂರಿನಂತೆ ಇಲ್ಲೂ ಲಾಕ್ ಡೌನ್ ಮಾಡಿ. ಇನ್ನಷ್ಟು ಆರೋಗ್ಯ ಹಾಗೂ ವೈದ್ಯಕೀಯ ಮೂಲ ಸೌಕರ್ಯ ಸಿದ್ದತೆ ಮಾಡಿ, ಸೂಕ್ತ ಸಮಯ ನೋಡಿ ಪೂರಕ ಯೋಜನೆಯ ಅನುಷ್ಠಾನ ಮಾದರಿ ಸಿದ್ದಪಡಿಸಿದ ಬಳಿಕವಷ್ಟೇ ಲಾಕ್ ಡೌನ್ ಹಂತ ಹಂತವಾಗಿ ತೆರವುಗೊಳಿಸಿ. ಇದು ನನ್ನ ವಿನಯ ಪೂರ್ವಕ ಮನವಿ'' ಎಂದು ಶಾಸಕ ಖಾದರ್ ಅವರು ಟ್ವೀಟ್ ಮಾಡಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಕಳೆದ ಒಂದು ವಾರದಿಂದ ಕೊರೊನಾ ಪ್ರಕರಣಗಳ ಸಂಖ್ಯೆ ವ್ಯಾಪಕವಾಗಿ ಏರಿಕೆಯಾಗುತ್ತಲ್ಲೇ ಶನಿವಾರ 2 ಸಾವಿರದ ಗಡಿ ದಾಟಿದೆ. ಜಿಲ್ಲೆಯಲ್ಲಿ 2034 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು ಇಂದು ಸೋಂಕಿಗೆ ಬಲಿಯಾದ ಬೆಳ್ತಂಗಡಿಯ 60 ರ ವೃದ್ಧ ಸೇರಿದಂತೆ 42 ಮಂದಿ ಬಲಿಯಾಗಿದ್ದಾರೆ.