ಮಂಗಳೂರು, ಜು.12 (DaijiworldNews/MB) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿರುವ ನಡುವೆಯೇ ಈಗ ಮಂಗಳೂರಿನಲ್ಲಿ ಇಬ್ಬರು ಪತ್ರಕರ್ತರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ರಾಷ್ಟ್ರೀಯ ಮಾಧ್ಯಮದ ಪ್ರತಿನಿಧಿಗಳಾಗಿ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರಿಬ್ಬರೂ ಕೂಡಾ ಮಂಗಳೂರಿನಲ್ಲಿ ಎಲ್ಲಾ ಪತ್ರಕರ್ತರಿಗೆ ಕೊರೊನಾ ಪರೀಕ್ಷೆ ನಡೆಸಿದಾಗ ಪರೀಕ್ಷಿಸಲಾಗಿದ್ದು ಆ ಸಂದರ್ಭದಲ್ಲಿ ನೆಗೆಟಿವ್ ವರದಿ ಬಂದಿತ್ತು.
ಆದರೆ ಇತ್ತೀಚೆಗೆ ಇಬ್ಬರಿಗೂ ಕೊರೊನಾ ಲಕ್ಷಣಗಳು ಕಂಡು ಬಂದ ಕಾರಣದಿಂದ ಮತ್ತೊಮ್ಮೆ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆ ನಡೆಸಿದಾಗ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಪ್ರಸ್ತುತ ಇಬ್ಬರು ಕೂಡಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
''ಇನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ಪರಿಸ್ಥಿತಿ ಎದುರಾಗುವ ಸಾಧ್ಯತೆಯಿದ್ದು ನಾವೆಲ್ಲರೂ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ ಕರ್ತವ್ಯ ನಿರ್ವಹಿಸಬೇಕು. ಕೋವಿಡ್ ಬಗ್ಗೆ ಯಾರೂ ಆತಂಕ ಪಡುವುದು ಬೇಡ, ಆದರೆ ಮುಂಜಾಗ್ರತೆ, ಸುರಕ್ಷತೆ ಅಗತ್ಯ'' ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಶ್ರೀನಿವಾಸ್ ನಾಯಕ್ ತಿಳಿಸಿದ್ದಾರೆ.