ಉಡುಪಿ, ಜು.12 (DaijiworldNews/MB) : ಯೋಗೀಶ್ ಪೂಜಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಉಡುಪಿ ಬೈಲಕೆರೆ ನಿವಾಸಿ ಅನೂಪ್ ಕುಂದರ್ (38) ಬಾಗಲಕೋಟೆಯಲ್ಲಿ ತಲೆಮರೆಸಿಕೊಂಡಿದ್ದ ಎಂದು ವರದಿಯಾಗಿದೆ.
ಜು.6 ರ ಸೋಮವಾರ ರಾತ್ರಿ 11.30 ಕ್ಕೆ ತೆಂಕನಿಡಿಯೂರಿನ ಲಕ್ಷ್ಮೀನಗರ ಬಳಿ ಕಾರಿನಲ್ಲಿ ಬಂದ ಗುಂಪೊಂದು ಮಾರಕಾಸ್ತ್ರಗಳಿಂದ ಇರಿದು ಯೋಗೀಶ್ ಪೂಜಾರಿ ಹತ್ಯೆ ನಡೆಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಲ್ಪೆ ಪೊಲೀಸರು ನಾಲ್ವರನ್ನು ಬಂಧಿಸಿದ್ದು ಈಗ ಬಾಗಲಕೋಟೆಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಅನೂಪ್ ಕುಂದರ್ನ್ನು ಕೂಡಾ ಬಂಧಿಸಿದ್ದಾರೆ.
ವೃತ್ತಿಯಲ್ಲಿ ಎಲೆಕ್ಟ್ರಿಶನ್ ಆಗಿರುವ ಈತ ಯೋಗೀಶ್ ಪೂಜಾರಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾಗಿದ್ದು ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಹಿಂದೆ ಕುಖ್ಯಾತ ರೌಡಿ ಶೀಟರ್ ಸುಜಿತ್ ಪಿಂಟೋ, ಆತನ ಸಹೋದರ ರೋಹಿತ್ ಪಿಂಟೋ, ಅಣ್ಣು ಅಲಿಯಾಸ್ ಪ್ರದೀಪ್, ವಿನಯ್ ಬಂಧಿಸಿದ್ದರು.