ಕಾಪು, ಜು 12 (DaijiworldNews/PY): ಕಾಪು ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರಿಗೆ ಕೊರೊನಾ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಠಾಣೆಯನ್ನು ಎರಡು ದಿನಗಳ ಕಾಲ ಸೀಲ್ಡೌನ್ ಮಾಡಲಾಗಿದ್ದು, ಠಾಣೆಯನ್ನು ತಾತ್ಕಾಲಿಕವಾಗಿ ಪಕ್ಕದ ವೀರಭದ್ರ ಸಭಾ ಭವನಕ್ಕೆ ಸ್ಥಳಾಂತರಿಸಲಾಗಿದೆ.

ಕಾಪು ಠಾಣೆಯನ್ನು ಮುಂದಿನ ಮಂಗಳವಾರದವರೆಗೆ ಸೀಲ್ಡೌನ್ ಮಾಡಿ, ಪಕ್ಕದ ಸಭಾಭವನದಲ್ಲಿ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗಿದೆ. ಠಾಣೆಗೆ ಸ್ಯಾನಿಟೈಸ್ ಮಾಡಲಾಗಿದೆ.
ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಕಾಪು ವೃತ್ತನಿರೀಕ್ಷಕ ಮಹೇಶ್ಪ್ರಸಾದ್ ಅವರು, ಕಾಪು ಪೊಲೀಸ್ ಠಾಣೆಯ ಸಿಬ್ಬಂದಿ ಕೋಟದಿಂದ ಕಾಪು ಠಾಣೆಗೆ ಬಸ್ಸಿನಲ್ಲಿ ಪ್ರತಿದಿನ ಸಂಚರಿಸುತ್ತಿದ್ದು, ಇದರಿಂದ ಇವರಿಗೆ ಪಾಸಿಟಿವ್ ಬಂದಿರಬಹುದು ಎಂದು ಆಲೋಚಿಸಲಾಗಿದೆ. ಅವರನ್ನು ಉಡುಪಿಯ ಟಿಎಂಎ ಪೈ ಕೊರೊನಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಠಾಣೆಯನ್ನು ಎರಡು ದಿನಗಳ ಕಾಲ ಸಮೀಪದ ವೀರಭದ್ರ ದೇವಸ್ಥಾನಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗಿದೆ. ಕಾಪು ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 36 ಸಿಬ್ಬಂದಿ ಮತ್ತು 9 ಹೋಮ್ಗಾರ್ಡ್ ಸಿಬ್ಬಂದಿಗಳನ್ನು ಒಂದು ವಾರಗಳ ಕಾಲ ಹೋಂ ಕ್ವಾರಂಟೈನ್ ಒಳ ಪಡಿಸಲಾಗಿದೆ. ಪಡುಬಿದ್ರಿ, ಶಿರ್ವ ಹಾಗೂ ಕಟಪಾಡಿ ಹೊರಠಾಣೆಯ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನೇಮಿಸಲಾಗಿದೆ. ಕಟಪಾಡಿ ಹೊರಠಾಣೆಯ ಎಎಸ್ಐ ದಯಾನಂದ್ರವರಿಗೆ ಠಾಣೆಯ ಜವಾಬ್ದಾರಿ ನೀಡಲಾಗಿದೆ. 48 ಗಂಟೆಗಳ ಅವಧಿಯಲ್ಲಿ ಠಾಣೆಯನ್ನು ಸ್ಯಾನಿಟೈಸ್ ಮಾಡಿ, ಮೂರನೆ ದಿನಕ್ಕೆ ಠಾಣೆಯನ್ನು ಮತ್ತೆ ಪುನಾರಂಭಿಸಲಾಗುತ್ತದೆ ಎಂದೂ ಮಹೇಶ್ ಪ್ರಸಾದ್ ಹೇಳಿದ್ದಾರೆ.
ಕಾಪು ತಾಲೂಕಿನಲ್ಲಿ ಸಂಪೂರ್ಣ ಲಾಕ್ಡೌನ್ ಸಂಪೂರ್ಣ ಯಶಸ್ವಿ ಆಗಿದ್ದು, ಜನರು ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿ ಮುಗ್ಗಟ್ಟುಗಳ ಬಾಗಿಲು ಮುಚ್ಚಿದ್ದಾರೆ. ಅಲ್ಲೊಂದು ಇಲ್ಲೊಂದು ವಾಹನಗಳು ಸಂಚರಿಸುತ್ತಿದ್ದು, ಅಗತ್ಯ ವಸ್ತುಗಳ ಖರೀದಿಗಾಗಿ ಮಾತ್ರ ಜನರು ರಸ್ತೆಗಿಳಿದಿದ್ದಾರೆ. ಕಾಪು ತಾಲೂಕಿನ ಕಾಪು, ಶಿರ್ವ, ಪಡುಬಿದ್ರಿ, ಉಚ್ಚಿಲ, ಹೆಜಮಾಡಿ, ಮೂಳೂರು ಮತ್ತಿತರ ಪ್ರದೇಶಗಳಲ್ಲಿ ಲಾಕ್ ಡೌನ್ ಯಶಸ್ಸು ಕಂಡಿದೆ.