ಮಂಗಳೂರು, ಜು13(Daijiworld News/MSP): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿರುವ ಕೊರೊನಾ ಸೋಂಕು ಆತಂಕಕ್ಕೆ ಕಾರಣವಾಗಿದ್ದು, ಹಲವೆಡೆ ಜನರೇ ಸ್ವಯಂಪ್ರೇರಿತವಾಗಿ ಲಾಕ್ಡೌನ್ ನಡೆಸುತ್ತಿದ್ದಾರೆ.

ಇನ್ನು ಜಿಲ್ಲಾಡಳಿತವೂ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಮುಂದೆ ಯಾವೆಲ್ಲಾ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವುದರ ಬಗ್ಗೆ ಸೋಮವಾರ ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿಗಳ ಜತೆ ವೀಡಿಯೋ ಕಾನ್ಫರೆನ್ಸ್ ನಡೆಯಲಿದೆ.
ಇದೇ ಸಭೆಯಲ್ಲಿ ಜಿಲ್ಲೆಯಲ್ಲಿ ಲಾಕ್ಡೌನ್ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವ ಸಾಧ್ಯತೆ ಇದೆ. ಈ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದು, ಮುಂದಿನ ನಿರ್ಧಾರ ಸಿಎಂ ಜೊತೆ ಚರ್ಚಿಸಿದ ಬಳಿಕ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಲಾಕ್ ಡೌನ್ ಗೆ ಆಗ್ರಹಿಸಿ ಅಭಿಯಾನ ಆರಂಭವಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಹಾಗೂ ಕೊರೊನಾದಿಂದ ಮೃತಪಡುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದುಈ ಹಿನ್ನಲೆಯಲ್ಲಿ ಲಾಕ್ ಡೌನ್ ಆಗತ್ಯವಿದೆ ಎಂದು ಅಭಿಯಾನದಲ್ಲಿ ಆಗ್ರಹಿಸಲಾಗುತ್ತಿದೆ.